“ಎನ್‍ಎಸ್‍ಎಸ್ ವಿಶೇಷ ಶಿಬಿರ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿ ವೃದ್ಧಿ”.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 14

ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಮದಕರಿನಾಯಕ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಶ್ರೀಮತಿ ಯಶೋದರಮ್ಮ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಗೂ ಶ್ರೀ ಕೋಟೆ ಸಣ್ಣ ಬೋರಪ್ಪಬೋರಮ್ಮ ಪ್ರಥಮ ದರ್ಜೆ ಕಾಲೇಜಿನಿಂದ ಸಂಯುಕ್ತವಾಗಿ ಜೆ.ಎನ್.ಕೋಟೆಯಲ್ಲಿ ಆಯೋಜಿಸಿದ್ದ ಎನ್‍ಎಸ್‍ಎಸ್ ವಿಶೇಷ ಶಿಬಿರ ಮಂಗಳವಾರ ಯಶಸ್ವಿಯಾಗಿ ಮುಕ್ತಾಯವಾಯಿತು.

ಶಿಬಿರದ 6ನೇ ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ದೀಪೋತ್ಸವ ಸಮಾರಂಭಕ್ಕೆ ಅಧ್ಯಕ್ಷತೆ ವಹಿಸಿದ್ದ ಎಸ್. ಸಂದೀಪ್, ಎನ್‍ಎಸ್‍ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ ಎಂದು ಹೇಳಿ ಗ್ರಾಮಸ್ಥರ ಸಮ್ಮುಖದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, ಯುವಜನರಲ್ಲಿ ಸಮಾಜಮುಖಿ ಚಿಂತನೆ ಬೆಳೆಸುವಲ್ಲಿ ಇಂತಹ ಶಿಬಿರಗಳ ಪಾತ್ರ ಅನನ್ಯ ಎಂದರು.

ಪ್ರಾಂಶುಪಾಲರಾದ ಡಾ. ಲತಾ ಎಸ್. ಮಾತನಾಡಿ, ಆರು ದಿನಗಳ ಅವಧಿಯಲ್ಲಿ ಸ್ವಚ್ಛತಾ ಕಾರ್ಯ, ಶ್ರಮದಾನ, ಆರೋಗ್ಯ ಜಾಗೃತಿ ಮತ್ತು ಪಶು ಸಂಗೋಪನೆ ಕುರಿತ ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮಾಧಿಕಾರಿಗಳಾದ ಡಾ. ಧನಂಜಯ ಆರ್.ಜಿ., ಶ್ರೀನಿವಾಸ ದೊಡ್ಡಮನಿ ಅವರ ನೇತೃತ್ವದಲ್ಲಿ ಜೆ.ಎನ್. ಕೋಟೆ ಹಾಗೂ ನರೇನಹಾಳ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ಮತ್ತು ಶ್ರಮದಾನ ನಡೆಸಲಾಯಿತು. ಊರಿನ ಪ್ರಮುಖ ಬೀದಿಗಳು, ದೇವಸ್ಥಾನಗಳ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಮೆರೆದರು. ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡರು ಸಹ ಉತ್ತಮ ಸಹಕಾರ ನೀಡಿದರು. ನಿವೃತ್ತ ಪಿಎಸ್‍ಐ ತ್ಯಾಗರಾಜ್,ವಿದ್ಯಾರ್ಥಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಮತ್ತು ಸಂವಿಧಾನ ಮೌಲ್ಯಗಳ ಕುರಿತು ಸಂದೇಶ ನೀಡಿದರು.

ಆರು ದಿನಗಳ ಶಿಬಿರವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ಮತ್ತು ಗ್ರಾಮೀಣ ಸೇವೆಗೆ ಮಹತ್ವದ ವೇದಿಕೆಯಾಗಿದ್ದು, ಯಶಸ್ವಿಯಾಗಿ ಪೂರ್ಣಗೊಂಡಿತು. ಶಿಬಿರದ ಕೊನೆಯ ದಿನ ಧ್ವಜಾರೋಹಣದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

Leave a Reply

Your email address will not be published. Required fields are marked *