ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ರೈತರಿಗೆ ವಾರ್ಷಿಕ 6000 ರೂ. ಆರ್ಥಿಕ ನೆರವು, ಯಾರು ಅರ್ಹರು? ಅರ್ಜಿ ಸಲ್ಲಿಕೆ ಹೇಗೆ?

ರೈತರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಕೇಂದ್ರ ಸರ್ಕಾರವು 2019 ರಲ್ಲಿ ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (ಪಿಎಂ ಕಿಸಾನ್). ಸ್ವಂತ ಕೃಷಿ ಭೂಮಿ ಹೊಂದಿರುವ ದೇಶದ ಕೋಟ್ಯಂತರ ರೈತರಿಗೆ ಈ ಯೋಜನೆಯಡಿ ವಾರ್ಷಿಕ 6000 ರೂ.ಗಳ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಈ ಮೊತ್ತವನ್ನು ತಲಾ 2000 ರೂ.ಗಳಂತೆ 3 ಸಮಾನ ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ನಡೆಯುವ ವಿಶ್ವದ ಅತಿ ದೊಡ್ಡ ಯೋಜನೆ ಇದಾಗಿದ್ದು, ಇದುವರೆಗೆ ಒಟ್ಟು 22 ಕಂತುಗಳಲ್ಲಿ ಸುಮಾರು 4.25 ಲಕ್ಷ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಯೋಜನೆಯ ಲಾಭ ಪಡೆಯಲು ಇರುವ ಅರ್ಹತೆಗಳು:

  • ಫಲಾನುಭವಿಯು ಭಾರತೀಯ ಪ್ರಜೆಯಾಗಿರಬೇಕು.
  • ರೈತರು ತಮ್ಮ ಹೆಸರಿನಲ್ಲಿ ಕೃಷಿ ಯೋಗ್ಯ ಜಮೀನು ಹೊಂದಿರಬೇಕು.
  • ಒಂದು ಕುಟುಂಬದಲ್ಲಿ (ಪತಿ, ಪತ್ನಿ ಹಾಗೂ ಅಪ್ರಾಪ್ತ ಮಕ್ಕಳು) ಒಬ್ಬರಿಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತದೆ.

ಯೋಜನೆಗೆ ಯಾರು ಅನರ್ಹರು? ಸ್ವಂತ ಕೃಷಿ ಭೂಮಿ ಹೊಂದಿದ್ದರೂ ಸಹ, ಈ ಕೆಳಕಂಡ ವರ್ಗಗಳಿಗೆ ಸೇರಿದವರು ಹಾಗೂ ಅವರ ಕುಟುಂಬದವರು ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಿಲ್ಲ:

  • ಹಾಲಿ ಅಥವಾ ಮಾಜಿ ಸಾಂವಿಧಾನಿಕ ಹುದ್ದೆ ಹೊಂದಿರುವವರು, ಶಾಸಕರು, ಸಂಸದರು, ಮೇಯರ್‌ಗಳು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು.
  • ವೈದ್ಯರು, ವಕೀಲರು, ಎಂಜಿನಿಯರ್‌ಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು ಹಾಗೂ ಆರ್ಕಿಟೆಕ್ಟ್‌ಗಳಂತಹ ನೋಂದಾಯಿತ ವೃತ್ತಿಪರರು.
  • ಕೇಂದ್ರ ಅಥವಾ ರಾಜ್ಯ ಸರ್ಕಾರದ ಪ್ರಸ್ತುತ ಹಾಗೂ ನಿವೃತ್ತ ನೌಕರರು.
  • ನಿವೃತ್ತಿಯ ನಂತರ ಮಾಸಿಕ 10000 ರೂ.ಗಳಿಗಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವವರು.
  • ಆದಾಯ ತೆರಿಗೆ (ಐಟಿ ರಿಟರ್ನ್ಸ್) ಪಾವತಿಸುತ್ತಿರುವವರು.
  • 2019 ರ ನಂತರ ಹೊಸದಾಗಿ ಕೃಷಿ ಜಮೀನು ಖರೀದಿಸಿದವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಹೊಸದಾಗಿ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ pmkisan.gov.in/ಭೇಟಿ ನೀಡಿ.
  • ಮುಖಪುಟದಲ್ಲಿರುವ ‘Farmers Corner’ ವಿಭಾಗದಲ್ಲಿ ‘New Farmer Registration’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ಸಂಖ್ಯೆ ಮತ್ತು ಅಲ್ಲಿ ನೀಡಲಾದ ಕ್ಯಾಪ್ಚಾ (Captcha) ಕೋಡ್ ಅನ್ನು ನಮೂದಿಸಿ.
  • ಪರದೆಯ ಮೇಲೆ ಕೇಳಲಾಗುವ ಅಗತ್ಯ ಮಾಹಿತಿಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ, ‘Yes’ ಎಂದು ಖಚಿತಪಡಿಸಿ.
  • ಬಳಿಕ ತೆರೆದುಕೊಳ್ಳುವ ಅಪ್ಲಿಕೇಶನ್ ಫಾರ್ಮ್‌ನಲ್ಲಿ ಸಂಪೂರ್ಣ ವಿವರಗಳನ್ನು ತುಂಬಿ ಸೇವ್ ಮಾಡಿ.
  • ಮುಂದಿನ ಮಾಹಿತಿಗಾಗಿ ಅಥವಾ ರೆಫರೆನ್ಸ್ ಗಾಗಿ ಸಲ್ಲಿಸಿದ ಅರ್ಜಿಯ ಪ್ರಿಂಟೌಟ್ ಅನ್ನು ನಿಮ್ಮ ಬಳಿ ಕಾಯ್ದಿಟ್ಟುಕೊಳ್ಳಿ.

Leave a Reply

Your email address will not be published. Required fields are marked *