ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಮತ್ತು ಉದುರುವುದು ಪ್ರಕೃತಿಯ ಸಹಜ ನಿಯಮ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಕೂದಲು ಉದುರುವಿಕೆ ಮತ್ತು ಬೋಳುತನ ಒಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ಪುರುಷರಲ್ಲಿ ಕೇವಲ 29ನೇ ವಯಸ್ಸಿಗೆ ಬೋಳುತನ ಕಾಣಿಸಿಕೊಳ್ಳುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ಇತ್ತೀಚಿನ ಬೃಹತ್ ಅಧ್ಯಯನವೊಂದು ಬಹಿರಂಗಪಡಿಸಿದೆ.
ಕೂದಲು ಉದುರಲು ಆರಂಭವಾದ ತಕ್ಷಣ ಬಹುತೇಕರು ಮಾಡುವ ಮೊದಲ ಕೆಲಸವೆಂದರೆ ಬಳಸುವ ಶಾಂಪೂ ಅಥವಾ ಎಣ್ಣೆಯನ್ನು ಬದಲಾಯಿಸುವುದು. ಆದರೆ, ಇದು ಕೇವಲ ತಲೆಬುರುಡೆಯ (ನೆತ್ತಿ) ಮೇಲ್ಮೈ ಸಮಸ್ಯೆಯಲ್ಲ; ಬದಲಾಗಿ ನಮ್ಮ ಹದಗೆಡುತ್ತಿರುವ ಆಂತರಿಕ ಆರೋಗ್ಯ ಮತ್ತು ಜೀವನಶೈಲಿಯ ಪ್ರತಿಬಿಂಬವಾಗಿದೆ.
ಅಧ್ಯಯನ ಹೇಳುವುದೇನು? ದೇಶಾದ್ಯಂತ ಸುಮಾರು 5.61 ಲಕ್ಷ ಪುರುಷರ ಕೇಶ ಆರೈಕೆ ಮತ್ತು ಆರೋಗ್ಯದ ಕುರಿತು ನಡೆಸಲಾದ ವಿಸ್ತೃತ ಸಮೀಕ್ಷೆಯೊಂದು ಈ ಮಾಹಿತಿಯನ್ನು ಹೊರಹಾಕಿದೆ. ಉತ್ತರ ಭಾರತದ ಯುವಕರಿಗೆ ಹೋಲಿಸಿದರೆ ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣದಂತಹ ದಕ್ಷಿಣ ರಾಜ್ಯಗಳ ಯುವಕರಲ್ಲಿ ಕೂದಲಿನ ಆರೋಗ್ಯ ತೀರಾ ಕಳವಳಕಾರಿಯಾಗಿದೆ. ಕೂದಲು ಉದುರುವ ಸಮಸ್ಯೆ ಎದುರಿಸುತ್ತಿರುವ ಪುರುಷರ ಸರಾಸರಿ ವಯಸ್ಸು ಕೇವಲ 29 ವರ್ಷ. ಆಘಾತಕಾರಿ ವಿಚಾರವೆಂದರೆ, ಶೇ. 55.2 ರಷ್ಟು ಯುವಕರು ಸಮಸ್ಯೆ ಕೈಮೀರಿ ಹೋದ ನಂತರವೇ (ತೀವ್ರ ಬೋಳುತನ ಶುರುವಾದಾಗ) ತಜ್ಞ ವೈದ್ಯರ ಮೊರೆ ಹೋಗುತ್ತಿದ್ದಾರೆ.
ಯುವಕರಲ್ಲಿ ಕೂದಲು ಉದುರಲು ಅಸಲಿ ಕಾರಣಗಳೇನು?
1. ವಿಪರೀತ ಮಾನಸಿಕ ಒತ್ತಡ (Stress): ನಮ್ಮ ವೇಗದ ಜೀವನಶೈಲಿಯೇ ಕೂದಲು ಉದುರುವಿಕೆಗೆ ಪ್ರಮುಖ ಕಾರಣ. ಆಂತರಿಕ ಒತ್ತಡ ಹೆಚ್ಚಾದಾಗ ಅದರ ಮೊದಲ ಹೊಡೆತ ಬೀಳುವುದು ಕೂದಲಿನ ಮೇಲೆ. ನಿರಂತರ ಮಾನಸಿಕ ಒತ್ತಡವು ದೇಹದಲ್ಲಿ ‘ಕಾರ್ಟಿಸೋಲ್’ ಎಂಬ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕೂದಲಿನ ಬೇರುಗಳ ಬೆಳವಣಿಗೆಯನ್ನು ತಡೆಯುತ್ತದೆ. ಸಮೀಕ್ಷೆಯ ಪ್ರಕಾರ, ರಾಷ್ಟ್ರೀಯ ಮಟ್ಟದಲ್ಲಿ ಶೇ. 54.6 ರಷ್ಟು ಜನರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಆದರೆ, ತಮಿಳುನಾಡಿನಲ್ಲಿ ಶೇ. 64.3, ತೆಲಂಗಾಣದಲ್ಲಿ ಶೇ. 63.6 ಮತ್ತು ಕರ್ನಾಟಕದಲ್ಲಿ ಶೇ. 61.3 ರಷ್ಟು ಯುವಕರು ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ.
2. ನಿದ್ರಾಹೀನತೆ ಮತ್ತು ಸ್ಕ್ರೀನ್ ಟೈಮ್: ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆ ಹಾಗೂ ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳಲ್ಲಿ ತಡರಾತ್ರಿಯವರೆಗೆ ಸಿರೀಸ್, ಸಿನಿಮಾಗಳನ್ನು ನೋಡುವುದು ಯುವಜನತೆಯ ನಿದ್ದೆಯನ್ನು ಕಸಿದುಕೊಂಡಿದೆ. ನಿದ್ದೆ ಕಡಿಮೆಯಾದಾಗ ದೇಹದ ಜೀವಕೋಶಗಳ ಪುನರುತ್ಪಾದನೆ (Cell regeneration) ಪ್ರಕ್ರಿಯೆ ಕುಂಠಿತಗೊಳ್ಳುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಶೇ. 29.5 ರಷ್ಟು ನಿದ್ರಾಹೀನತೆ ಸಮಸ್ಯೆಯಿದ್ದರೆ, ತಮಿಳುನಾಡಿನಲ್ಲಿ ಶೇ. 42.3, ತೆಲಂಗಾಣದಲ್ಲಿ ಶೇ. 36.7 ಹಾಗೂ ಕರ್ನಾಟಕದಲ್ಲಿ ಶೇ. 33.4 ರಷ್ಟು ಮಂದಿ ನಿದ್ದೆಯ ಕೊರತೆಯಿಂದ ಬಳಲುತ್ತಿದ್ದಾರೆ.
3. ಪೌಷ್ಟಿಕಾಂಶದ ಕೊರತೆ ಮತ್ತು ಮಂದಗತಿಯ ಚಯಾಪಚಯ (Metabolism): ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಜಂಕ್ ಫುಡ್‌ಗಳಿಗೆ ಮಾರುಹೋಗಿರುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುತ್ತಿಲ್ಲ. ಇದರಿಂದ ಚಯಾಪಚಯ ಕ್ರಿಯೆ ನಿಧಾನಗೊಂಡು, ಕೂದಲಿನ ಬೇರುಗಳಿಗೆ ಬೇಕಾದ ಪೋಷಣೆ ಇಲ್ಲದೆ ಕೂದಲು ಉದುರತೊಡಗುತ್ತದೆ.
ಪರಿಹಾರವೇನು? ತಜ್ಞರು ಏನು ಹೇಳುತ್ತಾರೆ? ಬರೀ ದುಬಾರಿ ಶಾಂಪೂ ಅಥವಾ ಎಣ್ಣೆಗಳನ್ನು ಹಚ್ಚುವುದರಿಂದ ಕೂದಲು ಮತ್ತೆ ಹುಟ್ಟುವುದಿಲ್ಲ ಎನ್ನುತ್ತಾರೆ ತಜ್ಞರು. ಸಮಸ್ಯೆಯ ಮೂಲವನ್ನು ಅರಿತು ಗುಣಪಡಿಸುವುದು ಅತ್ಯಗತ್ಯ.
- ಒತ್ತಡ ನಿರ್ವಹಣೆ: ಯೋಗ, ಧ್ಯಾನ ಅಥವಾ ಹವ್ಯಾಸಗಳ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.
- ಉತ್ತಮ ನಿದ್ದೆ: ಪ್ರತಿದಿನ ಕನಿಷ್ಠ 7-8 ಗಂಟೆಗಳ ಕಾಲ ಗುಣಮಟ್ಟದ ನಿದ್ದೆ ಮಾಡುವುದು ಕಡ್ಡಾಯ. ಮಲಗುವ ಮುನ್ನ ಮೊಬೈಲ್ ಬಳಕೆಯನ್ನು ತ್ಯಜಿಸಬೇಕು.
- ಸಮತೋಲಿತ ಆಹಾರ: ನಿಮ್ಮ ದೈನಂದಿನ ಆಹಾರದಲ್ಲಿ ಮೊಟ್ಟೆ, ಮೀನು, ಚಿಕನ್, ಹಸಿರು ಸೊಪ್ಪು-ತರಕಾರಿಗಳು, ತಾಜಾ ಹಣ್ಣುಗಳು ಹಾಗೂ ಧಾನ್ಯಗಳನ್ನು ಕಡ್ಡಾಯವಾಗಿ ಸೇರಿಸಿಕೊಳ್ಳಬೇಕು.
ಒಟ್ಟಾರೆಯಾಗಿ, ಕೂದಲು ಉದುರುವಿಕೆಯನ್ನು ಆರಂಭದಲ್ಲೇ ಗುರುತಿಸಿ, ಉತ್ತಮ ಜೀವನಶೈಲಿ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಯೌವನದಲ್ಲೇ ಕಾಡುವ ಬೋಳುತನಕ್ಕೆ ಬ್ರೇಕ್ ಹಾಕಬಹುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j