“ಎಲ್ಲರಿಗೂ ಅಮ್ಮನಂತಿದ್ದರು” – ಚನ್ನಮ್ಮ ದೇವೇಗೌಡ ನಿಧನಕ್ಕೆ ಮಾಜಿ ಸಚಿವ ಎಚ್. ಆಂಜನೇಯ ಸಂತಾಪ.


ಚಿತ್ರದುರ್ಗ, ಜು. 18: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರ ನಿಧನ ಅತ್ಯಂತ ದುಃಖವನ್ನುಂಟು ಮಾಡಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಸಂತಾಪ ವ್ಯಕ್ತಪಡಿಸಿದ್ದಾರೆ.


2005–06ರಲ್ಲಿ ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ವೇಳೆ, ಜನ್ಮ ನೀಡಿದ ತಾಯಿಯಂತೆ ಪ್ರೀತಿಯಿಂದ ಆತಿಥ್ಯ ನೀಡಿದ ಕ್ಷಣಗಳು ಇಂದಿಗೂ ನೆನಪಿನಲ್ಲಿವೆ ಎಂದು ಅವರು ತಿಳಿಸಿದ್ದಾರೆ.


“ಅವರ ಕುಟುಂಬದ ಸದಸ್ಯರೊಂದಿಗೆ ನನ್ನನ್ನು ಕೂರಿಸಿ ಆತ್ಮೀಯವಾಗಿ ಊಟ ಬಡಿಸಿದ ಪ್ರೀತಿ ಮರೆಯಲಾಗದು. ನನ್ನಷ್ಟೇ ಅಲ್ಲದೆ, ಅವರ ಮನೆಗೆ ಭೇಟಿ ನೀಡುತ್ತಿದ್ದ ಪ್ರತಿಯೊಬ್ಬರನ್ನೂ ತಮ್ಮ ಮಕ್ಕಳಂತೆಯೇ ಪ್ರೀತಿಯಿಂದ ಕಾಣುತ್ತಿದ್ದರು” ಎಂದು ಅವರು ಸ್ಮರಿಸಿದ್ದಾರೆ.


ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಅವರ ರಾಜಕೀಯ ಜೀವನದ ಯಶಸ್ಸಿನ ಹಿಂದೆ ಚನ್ನಮ್ಮ ಅವರ ತ್ಯಾಗ ಮತ್ತು ಪ್ರೋತ್ಸಾಹ ಮಹತ್ತರ ಪಾತ್ರ ವಹಿಸಿದೆ. ಅವರ ಸದ್ಗುಣ, ಸರಳತೆ ಹಾಗೂ ಎಲ್ಲರನ್ನೂ ಸಮಾನವಾಗಿ ಕಾಣುವ ಹೃದಯವಂತಿಕೆ ಸದಾ ಸ್ಮರಣೀಯವಾಗಿರುತ್ತದೆ ಎಂದು ತಿಳಿಸಿದ್ದಾರೆ.


ಚನ್ನಮ್ಮ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳಿಗೆ ನೀಡಲಿ ಎಂದು ಎಚ್. ಆಂಜನೇಯ ಅವರು ಪ್ರಾರ್ಥಿಸಿದ್ದಾರೆ.


ಫೋಟೋ ಹಾಗೂ ವರದಿ: ಮಾರುತಿ

Leave a Reply

Your email address will not be published. Required fields are marked *