ಗಗನಯಾನ ಲೋಕದ ‘ಐರನ್ ಲೇಡಿ’ ಸುನಿತಾ ವಿಲಿಯಮ್ಸ್: ನಾಸಾದಿಂದ ನಿವೃತ್ತಿ

27 ವರ್ಷಗಳ ಸೇವೆಯ ನಂತರ ನಾಸಾದಿಂದ ಸುನಿತಾ ವಿಲಿಯಮ್ಸ್ ನಿವೃತ್ತಿ,608 ದಿನ ಬಾಹ್ಯಾಕಾಶದಲ್ಲಿ ಕಳೆದ ಭಾರತೀಯ ಮೂಲದ ಗಗನಯಾನಿಯ ಅಸಾಧಾರಣ ಪಯಣ.

ನವದೆಹಲಿ:
ಭಾರತೀಯ ಮೂಲದ ಖ್ಯಾತ ಗಗನಯಾನಿ ಸುನಿತಾ ವಿಲಿಯಮ್ಸ್ ಅವರು ಡಿಸೆಂಬರ್ 27, 2025ರಂದು ನಾಸಾದಿಂದ ಅಧಿಕೃತವಾಗಿ ನಿವೃತ್ತರಾಗಿದ್ದಾರೆ ಎಂದು ನಾಸಾ ಮಂಗಳವಾರ ಪ್ರಕಟಿಸಿದೆ. 27 ವರ್ಷಗಳ ಕಾಲ ನಾಸಾದ ಗಗನಯಾನಿಯಾಗಿ ಸೇವೆ ಸಲ್ಲಿಸಿದ ಸುನಿತಾ ವಿಲಿಯಮ್ಸ್, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಚ್ಚಳಿಯದ ಸಾಧನೆ ಮಾಡಿದ್ದಾರೆ.

ಭೂಮಿಯಿಂದ ಸುಮಾರು 400 ಕಿಲೋಮೀಟರ್ ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಕೇವಲ ಒಂದು ವಾರದ ಕಾರ್ಯನಿಮಿತ್ತ ತೆರಳಿದ್ದ ಸುನಿತಾ ವಿಲಿಯಮ್ಸ್ ಮತ್ತು ಸಹ ಗಗನಯಾನಿ ಬುಚ್ ವಿಲ್ಮೋರ್, ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಅನಿರೀಕ್ಷಿತವಾಗಿ 9 ತಿಂಗಳು (286 ದಿನ) ಬಾಹ್ಯಾಕಾಶದಲ್ಲೇ ಉಳಿಯಬೇಕಾಯಿತು. ಈ ಅವಧಿಯಲ್ಲಿ ಅವರ ಸುರಕ್ಷಿತ ಮರಳಿಗಾಗಿ ಭಾರತ ಸೇರಿದಂತೆ ಅನೇಕ ದೇಶಗಳ ಜನರು ಪ್ರಾರ್ಥಿಸಿದ್ದರು.

ನಾಸಾ ಆಡಳಿತಾಧಿಕಾರಿ ಜಾರೆಡ್ ಐಸಾಕ್‌ಮ್ಯಾನ್ ಅವರು,

“ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸುನಿತಾ ವಿಲಿಯಮ್ಸ್ ಅವರ ಸೇವೆ ಅಸಾಧಾರಣ. ಚಂದ್ರ ಮತ್ತು ಮಂಗಳ ಮಿಷನ್‌ಗಳಿಗೆ ಅವರ ಕೆಲಸಗಳು ಭದ್ರ ಅಡಿಪಾಯ ಹಾಕಿವೆ. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಿವೆ” ಎಂದು ಶ್ಲಾಘಿಸಿದರು.

ಮೂರು ಬಾಹ್ಯಾಕಾಶ ಮಿಷನ್‌ಗಳು – 608 ದಿನಗಳ ಸಾಧನೆ

ಸುನಿತಾ ವಿಲಿಯಮ್ಸ್ ಅವರು 1998ರಲ್ಲಿ ನಾಸಾ ಗಗನಯಾನಿಯಾಗಿ ಸೇರ್ಪಡೆಯಾದರು.

  • 2006, 2022 ಮತ್ತು 2024ರಲ್ಲಿ ಮೂರು ಪ್ರಮುಖ ಬಾಹ್ಯಾಕಾಶ ಮಿಷನ್‌ಗಳನ್ನು ಯಶಸ್ವಿಯಾಗಿ ಪೂರೈಸಿದರು
  • ಒಟ್ಟು 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ
  • 9 ಬಾರಿ ಬಾಹ್ಯಾಕಾಶ ನಡಿಗೆ ನಡೆಸಿದ್ದು
  • 62 ಗಂಟೆ 6 ನಿಮಿಷಗಳ ಕಾಲ ಸ್ಪೇಸ್‌ವಾಕ್ ಮಾಡಿದ್ದಾರೆ
  • ಬಾಹ್ಯಾಕಾಶದಲ್ಲೇ ಮ್ಯಾರಥಾನ್ ಓಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

ಕುಟುಂಬ ಮತ್ತು ಶಿಕ್ಷಣ ಹಿನ್ನೆಲೆ

ಸುನಿತಾ ವಿಲಿಯಮ್ಸ್ ಅವರ ಪೂರ್ವಜರು ಗುಜರಾತ್‌ನ ಮೆಹಸಾನಾ ಜಿಲ್ಲೆಯ ಜುಲಾಸನ್ ಗ್ರಾಮದವರು.
ಅವರ ತಂದೆ ದೀಪಕ್ ಪಾಂಡ್ಯಾ ಅವರು 1953ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಲ್ಲಿ ಇಂಟರ್‌ಮಿಡಿಯೇಟ್ ಸೈನ್ಸ್ ಪೂರ್ಣಗೊಳಿಸಿ, ನಂತರ ಅಮೆರಿಕದ ಒಹಿಯೋ ರಾಜ್ಯದ ಕ್ಲೆವ್‌ಲ್ಯಾಂಡ್‌ನಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ತರಬೇತಿ ಪಡೆದರು. 1964ರಲ್ಲಿ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಿಂದ ಶರೀರಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

1957ರಲ್ಲಿ ಅವರು ಸ್ಲೊವೆನಿಯಾ ಮೂಲದ ಉರ್ಸುಲಿನ್ ಬೊನ್ನಿ ಝಲೊಕಾರ್ ಅವರನ್ನು ವಿವಾಹವಾದರು. ಈ ದಂಪತಿಗೆ 1965ರಲ್ಲಿ ಸುನಿತಾ ಜನಿಸಿದರು. ಮ್ಯಾಸಚೂಸೆಟ್ಸ್‌ನ ನೀಡ್‌ಹ್ಯಾಮ್ನಲ್ಲಿ ಬೆಳೆದ ಅವರು,

  • 1983ರಲ್ಲಿ Needham High School
  • 1987ರಲ್ಲಿ US Naval Academyಯಿಂದ ಭೌತ ವಿಜ್ಞಾನದಲ್ಲಿ ಪದವಿ
  • 1995ರಲ್ಲಿ Florida Institute of Technologyಯಿಂದ Engineering Managementನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ

ಪ್ರೇರಣೆಯ ಸಂಕೇತ ಸುನಿತಾ

ಸುನಿತಾ ವಿಲಿಯಮ್ಸ್ ಅವರ ಜೀವನ ಪಯಣವು ಅಂತರಿಕ್ಷ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ಲಕ್ಷಾಂತರ ಯುವಕರಿಗೆ ಪ್ರೇರಣೆಯ ಸಂಕೇತವಾಗಿದೆ. ನಾಸಾದಲ್ಲಿ ಅವರ ಸೇವೆ ಚಿನ್ನದ ಅಕ್ಷರಗಳಲ್ಲಿ ದಾಖಲಾಗಲಿದೆ.

Leave a Reply

Your email address will not be published. Required fields are marked *