ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 23
ಮೂರು ವರ್ಷಗಳಿಂದಲೂ ಬಾಕಿಯಿರುವ 36 ಸಾವಿರ ಕೋಟಿ ರೂ.ಗಳನ್ನು ತಕ್ಷಣವೆ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಕ್ಕಾಗಿ ಮಾ.6 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆ.ಮಂಜುನಾಥ್ ತಿಳಿಸಿದರು.
ಜಿಲ್ಲಾ ಗುತ್ತಿಗೆದಾರರ ಸಂಘದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕೋಪಯೋಗಿ ಇಲಾಖೆಯಲ್ಲಿ 8300 ಕೋಟಿ ರೂ. ನೀರಾವರಿಯಲ್ಲಿ ಹದಿಮೂರು ಸಾವಿರ ಕೋಟಿ ರೂ. ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ 3200 ಕೋಟಿ ರೂ. ವಸತಿ ವಕ್ಫ್ನಲ್ಲಿ ಮೂರು ಸಾವಿರ ಕೋಟಿ ರೂ. ಸಣ್ಣ ನೀರಾವರಿ ಇಲಾಖೆಯಲ್ಲಿ 3300 ಕೋಟಿ ರೂ. ಕಾರ್ಮಿಕ ಇಲಾಖೆಯಲ್ಲಿ ಎರಡು ಸಾವಿರ ಕೋಟಿ ರೂ. ಬಿಬಿಎಂಪಿ.ಯಲ್ಲಿ 1600 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿರುವುದರಿಂದ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಹಲವಾರು ಬಾರಿ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆ ಸಚಿವರುಗಳ ಜೊತೆ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗದ ಕಾರಣ ಪ್ರತಿಭಟನೆಗೆ ಮುಂದಾಗಿದ್ದು, ಅಂದಾಜು ಮೂವತ್ತು ಸಾವಿರ ಗುತ್ತಿಗೆದಾರರು ಪಾಲ್ಗೊಳ್ಳುವರು ಎಂದು ಹೇಳಿದರು.
ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರಿಂದ ಕಮಿಷನ್ ಪಡೆಯುವುದಿಲ್ಲವೆಂದು ಹೇಳಿದ್ದರು. ಬಾಕಿ ಬಿಲ್ ಪಾವತಿಯಾಗದ ಕಾರಣ ಕಷ್ಟದಲ್ಲಿರುವ ಗುತ್ತಿಗೆದಾರು ಮನೆ, ಚಿನ್ನದ ಒಡವೆಗಳನ್ನು ಒತ್ತೆಯಿಟ್ಟಿದ್ದಾರೆ. ರಾಜ್ಯದ 19 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಗುತ್ತಿಗೆದಾರರು ಪ್ರತಿಭಟನೆಗೆ ಸಾಥ್ ಕೊಡುತ್ತಾರೆ. ಮಧ್ಯವರ್ತಿಗಳು ಖಾಸಗಿ ಕಚೇರಿಗಳನ್ನು ತೆರೆದು ಅಲ್ಲಿ ಕಾಮಗಾರಿಗೆ ಸಂಬಂಧಿಸಿದಂತೆ ವ್ಯವಹಾರಗಳನ್ನು ಕುದುರಿಸಿಕೊಂಡು ಕಾಮಗಾರಿಗಳನ್ನು ಯಾರಿಗೆ ನೀಡಬೇಕೆಂಬುದನ್ನು ನಿರ್ಧರಿಸುತ್ತಾರೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಮುಷ್ಕರದ ಹಾದಿ ಹಿಡಿಯದೆ ನಮಗೆ ಬೇರೆ ದಾರಿಯಿಲ್ಲ ಎಂದರು.
ಚಿತ್ರದುರ್ಗ, ಬಳ್ಳಾರಿ, ಹೊಸಪೇಟೆಯಲ್ಲಿ ಮೈನಿಂಗ್ ದಂಧೆ ಎಗ್ಗಿಲ್ಲದ ನಡೆಯುತ್ತಿದೆ. ಕೆಲವು ಶಾಸಕರು, ಸಚಿವರು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಕಾಮಗಾರಿಯ ಬಿಲ್ಗಳು ಬಾಕಿಯಿರುವುದಕ್ಕೆ ಸಂಬಂಧಿಸಿದಂತೆ ನೂರು ಪುಟಗಳ ದಾಖಲೆಯನ್ನು ಮುಖ್ಯಮಂತ್ರಿಗೆ ಕೊಟ್ಟಿದ್ದೇವೆ. ಮಾನವೀಯತೆಯಿಂದಲಾದರೂ ಸಿದ್ದರಾಮಯ್ಯನವರು ನಮ್ಮ ಜೊತೆ ಮಾತುಕತೆ ನಡೆಸಬಹುದಿತ್ತು. ಪ್ರಾಮಾಣಿಕವಾಗಿ ಸರ್ಕಾರಕ್ಕೆ ರಾಯಲ್ಟಿ ಕಟ್ಟುತ್ತಿದ್ದೇವೆ. ಆದರೂ ವಾಹನಗಳನ್ನು ಹಿಡಿದು ದಂಡ ಹಾಕುತ್ತಿದ್ದಾರೆ. ಜಿ.ಎಸ್.ಟಿ.ಸಮಸ್ಯೆಯಿದೆ. ಗುತ್ತಿಗೆದಾರರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಒಂದುವರೆ ಲಕ್ಷ ಗುತ್ತಿಗೆದಾರರಿದ್ದು, ಏಪ್ರಿಲ್ನಿಂದ ಕುಟುಂಬ ಸಮೇತ ಅನಿರ್ಧಿಷ್ಠಾವಧಿ ಮುಷ್ಕರ ನಡೆಸುವುದಾಗಿ ಕೆ.ಮಂಜುನಾಥ್ ಸರ್ಕಾರಕ್ಕೆ ಗಡುವು ನೀಡಿದರು.
ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲೇಶಪ್ಪ, ಉಪಾಧ್ಯಕ್ಷರುಗಳಾದ ಎಲ್.ಮಹೇಶ್, ವೈ.ತಿಪ್ಪೇಸ್ವಾಮಿ, ಕೆ.ಕರಿಯಪ್ಪ, ಜಿ.ದೇವೇಂದ್ರಪ್ಪ, ಬಲರಾಮರೆಡ್ಡಿ, ನಿರಂಜನಮೂರ್ತಿ, ರಂಗಸ್ವಾಮಿ, ಶ್ರೀನಿವಾಸ್, ದೇವರಾಜ್, ತಿಮ್ಮರಾಜ್ ಸೇರಿದಂತೆ ಅನೇಕ ಗುತ್ತಿಗೆದಾರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.