ಚಿತ್ರದುರ್ಗ, ಮೇ 24:
ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಆಯುಷ್ ಯೋಗ ಶಿಕ್ಷಣ ಸಂಸ್ಥೆಯು ಕಳೆದ ಒಂದು ವರ್ಷದಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ತರಗತಿಗಳ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನುಭಾನುವಾರ ವಿಜೃಂಭಣೆಯಿಂದ ಆಚರಿಸಿತು. ಇದೇ ಸಂದರ್ಭದಲ್ಲಿ ಸಂಸ್ಥೆಯು ತನ್ನ ಎರಡನೇ ವರ್ಷದ ಕಾರ್ಯಚಟುವಟಿಕೆಗಳಿಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮಠದಲ್ಲಿ ನಿರಂತರವಾಗಿ ನಡೆಯುತ್ತಿರುವ ಯೋಗಾಸನ ಹಾಗೂ ಪ್ರಾಣಾಯಾಮ ಅಭ್ಯಾಸದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಮಹತ್ವದ ಸಾಧನವಾಗಿದ್ದು, ಆಯುಷ್ ಯೋಗ ಶಿಕ್ಷಣ ಸಂಸ್ಥೆಯು ಗ್ರಾಮಾಂತರ ಪ್ರದೇಶಗಳಲ್ಲಿಯೂ ಯೋಗ ಶಿಬಿರಗಳನ್ನು ಆಯೋಜಿಸಿದರೆ ಶ್ರೀಮಠದಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಲ್.ಎಸ್. ಬಸವರಾಜ್ ಅವರು ವಾರ್ಷಿಕ ವರದಿಯನ್ನು ಮಂಡಿಸಿ, ಕಳೆದ ಒಂದು ವರ್ಷದ ವಿವಿಧ ಯೋಗ ಚಟುವಟಿಕೆಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ಸಾಧನೆಗಳ ಕುರಿತು ಸಭೆಗೆ ವಿವರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೋಗ ಗುರು ಶ್ರೀ ಎಲ್.ಎಸ್. ಚಿನ್ಮಯಾನಂದ ಅವರು ಮಾತನಾಡಿ, ವಿವಿಧ ಹಂತಗಳಲ್ಲಿ ಅಭ್ಯಾಸ ಮಾಡಬಹುದಾದ ಏಳು ವಿಧದ ಯೋಗಾಸನಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಇಂದಿನ ಯುವಪೀಳಿಗೆಯವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗದ ಅವಶ್ಯಕತೆ ಮತ್ತು ಅದರ ಮಹತ್ವದ ಕುರಿತು ಮನದಟ್ಟಾಗುವಂತೆ ತಿಳಿಸಿದರು.
ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಮಂಜುಳಾ ಅವರು ಆರೋಗ್ಯಕರ ಆಹಾರ ಪದ್ಧತಿ, ಆಹಾರದ ಸರಿಯಾದ ಪ್ರಮಾಣ ಹಾಗೂ ಜೀವನಶೈಲಿಯಲ್ಲಿ ಅನುಸರಿಸಬೇಕಾದ ಬದಲಾವಣೆಗಳ ಕುರಿತು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು. ಸರಿಯಾದ ಆಹಾರ ನಿರ್ವಹಣೆಯ ಮೂಲಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಂಸ್ಥೆಯ ವ್ಯವಸ್ಥಾಪಕರಾದ ರಾಮ್ ನರೇಶ್ ಜೀ, ಉಪಾಧ್ಯಕ್ಷರಾದ ಕೃಷ್ಣಮೂರ್ತಿಜೀ ಹಾಗೂ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್. ಮಂಜುನಾಥ್ ಅವರು ಯೋಗದ ಕುರಿತು ವಿಶೇಷ ಪಾಕ್ಷಿಕ ನಿರೂಪಣೆ ನೀಡಿದರು. ಆಯುಷ್ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಆರ್. ಪ್ರಸನ್ನ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ವಿಜಯಲಕ್ಷ್ಮಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.