ಎಸ್‌ಐಆರ್ ಪ್ರಕ್ರಿಯೆಗೆ ನಗರ ಪ್ರದೇಶದ ಮತದಾರರು ಹೆಚ್ಚಿನ ಸಹಕಾರ ನೀಡಬೇಕು: ಬಿಎಲ್‌ಒ ಎನ್.ಡಿ. ಕುಮಾರ್.

ಚಿತ್ರದುರ್ಗ, ಜು. 18:

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817


ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ನಗರ ಪ್ರದೇಶದ ವಿದ್ಯಾವಂತ ಮತದಾರರಿಂದ ನಿರೀಕ್ಷಿತ ಮಟ್ಟದ ಸಹಕಾರ ದೊರೆಯುತ್ತಿಲ್ಲ ಎಂದು ಬಿಎಲ್‌ಒ-2 ಎನ್.ಡಿ. ಕುಮಾರ್ ತಿಳಿಸಿದ್ದಾರೆ.

ನಗರದ ನಾಲ್ಕನೇ ವಾರ್ಡ್‌ನ 123ನೇ ಮತಗಟ್ಟೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಮತದಾರರಿಗೆ ಮಾಹಿತಿ ನೀಡಿದ ಅವರು, ಚುನಾವಣಾ ಆಯೋಗವು ಪ್ರತಿ ಮತದಾರರಿಗೆ ಎರಡು ನಮೂನೆಗಳನ್ನು ನೀಡುತ್ತಿದೆ. ಮತದಾರರು ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಒಂದಕ್ಕೆ ಸಹಿ ಹಾಕಿ ಬಿಎಲ್‌ಒಗೆ ಸಲ್ಲಿಸಬೇಕು. ಮತ್ತೊಂದು ನಮೂನೆಗೆ ಬಿಎಲ್‌ಒ ಸಹಿ ಮಾಡಿ ಮತದಾರರಿಗೆ ಹಿಂತಿರುಗಿಸಲಿದ್ದು, ಕರಡು ಮತದಾರರ ಪಟ್ಟಿ ಪ್ರಕಟವಾಗುವವರೆಗೆ ಅದನ್ನು ಸುರಕ್ಷಿತವಾಗಿ ಕಾಯ್ದಿರಿಸುವಂತೆ ಸಲಹೆ ನೀಡಿದರು.

ಈ ಪ್ರಕ್ರಿಯೆಯಲ್ಲಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಗ್ರಾಮೀಣ ಭಾಗಗಳಲ್ಲಿ ಎಸ್‌ಐಆರ್ ಕಾರ್ಯ ಸುಗಮವಾಗಿ ನಡೆಯುತ್ತಿದ್ದರೂ ನಗರ ಪ್ರದೇಶದಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟರು. ನಗರಸಭೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಮತದಾರರು ಸಹ ಸಕ್ರಿಯವಾಗಿ ಪಾಲ್ಗೊಂಡರೆ ಪ್ರಕ್ರಿಯೆ ಇನ್ನಷ್ಟು ಯಶಸ್ವಿಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ವ್ಯವಸ್ಥಾಪಕ ಜಯಣ್ಣ, ಶಾಸಕರ ಆಪ್ತ ಸಹಾಯಕ ಶಿವಾನಂದ್, ಕಮ್ಯೂನಿಟಿ ಮೊಬೈಲೈಸರ್ ದೀಪಾ, ಬಿಎಲ್‌ಒ ರೇಣುಕಾ, ನಗರಸಭೆಯ ಮಾಜಿ ಸದಸ್ಯ ರಾಜೇಶ್, ಕಾಂಗ್ರೆಸ್ ಮುಖಂಡ ಶಶಿಕಿರಣ್ ಹಾಗೂ ವಾರ್ಡ್‌ನ ಮತದಾರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *