2026ರ ಗುರು ಪೂರ್ಣಿಮಾ: ಮಹತ್ವ, ಪೂಜಾ ಮುಹೂರ್ತ ಹಾಗೂ ಆಚರಣೆಯ ಸಂಪೂರ್ಣ ಮಾಹಿತಿ

ಭಾರತೀಯ ಸಂಪ್ರದಾಯದಲ್ಲಿ ‘ಗುರು’ವಿಗೆ ದೇವರಿಗಿಂತಲೂ ಮಿಗಿಲಾದ ಸ್ಥಾನವನ್ನು ನೀಡಲಾಗಿದೆ. ಅಜ್ಞಾನದ ಕತ್ತಲೆಯನ್ನು ದೂರಮಾಡಿ ಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುವ ಗುರುವಿಗೆ ಕೃತಜ್ಞತೆ ಸಲ್ಲಿಸುವ ಅತ್ಯಂತ ಪವಿತ್ರವಾದ ದಿನವೇ ‘ಗುರು ಪೂರ್ಣಿಮಾ’. ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯಂದು ಈ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ.

ಶಿಕ್ಷಕರು, ಪೋಷಕರು, ಆಧ್ಯಾತ್ಮಿಕ ಮಾರ್ಗದರ್ಶಕರು ಸೇರಿದಂತೆ ಜೀವನದ ದಾರಿದೀಪವಾದ ಪ್ರತಿಯೊಬ್ಬರಿಗೂ ಗೌರವ ಸಮರ್ಪಿಸುವ ಸುದಿನವಿದು. ಮಹಾಭಾರತದ ಕರ್ತೃ ಹಾಗೂ ವೇದಗಳನ್ನು ವಿಂಗಡಿಸಿದ ಮಹರ್ಷಿ ವೇದವ್ಯಾಸರ ಜನ್ಮದಿನವಾದ್ದರಿಂದ, ಇದನ್ನು ‘ವ್ಯಾಸ ಪೂರ್ಣಿಮೆ’ ಎಂದೂ ಕರೆಯಲಾಗುತ್ತದೆ. ಹಿಂದೂಗಳು ಮಾತ್ರವಲ್ಲದೆ, ಬೌದ್ಧ ಧರ್ಮೀಯರೂ ಸಹ ಭಗವಾನ್ ಬುದ್ಧನಿಗೆ ನಮನ ಸಲ್ಲಿಸುವ ಮೂಲಕ ಈ ದಿನವನ್ನು ಸಂಭ್ರಮಿಸುತ್ತಾರೆ. ಮುಂಬರುವ ೨೦೨೬ನೇ ಸಾಲಿನ ಗುರು ಪೂರ್ಣಿಮೆಯ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.

2026ರ ಗುರು ಪೂರ್ಣಿಮಾ: ದಿನಾಂಕ ಮತ್ತು ಶುಭ ಮುಹೂರ್ತ

  • ಹಬ್ಬದ ದಿನಾಂಕ: ಜುಲೈ29,2026 (ಬುಧವಾರ)
  • ಪೂರ್ಣಿಮಾ ತಿಥಿ ಆರಂಭ: ಜುಲೈ 28,2026(ಮಂಗಳವಾರ) ಸಂಜೆ 6:18ಕ್ಕೆ
  • ಪೂರ್ಣಿಮಾ ತಿಥಿ ಅಂತ್ಯ: ಜುಲೈ 29,2026 (ಬುಧವಾರ) ರಾತ್ರಿ8:05ಕ್ಕೆ
  • ಚಂದ್ರೋದಯದ ಸಮಯ: ಜುಲೈ 29, ಸಂಜೆ 7:21ಕ್ಕೆ (ಶುಕ್ಲ ಪಕ್ಷದ ಪೂರ್ಣಿಮಾ ಚಂದ್ರೋದಯ)

ಪೂಜಾ ವಿಧಿ-ವಿಧಾನಗಳು

ಈ ಪವಿತ್ರ ದಿನದಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು:

  • ಶುದ್ಧಿ ಮತ್ತು ವಸ್ತ್ರ: ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮುಗಿಸಿ. ಈ ದಿನ ಬಿಳಿ ಬಣ್ಣದ ಉಡುಪು ಧರಿಸುವುದು ಶ್ರೇಷ್ಠ.
  • ನಮನ: ಮನೆಯಲ್ಲಿರುವ ಹಿರಿಯರು, ಪೋಷಕರು ಹಾಗೂ ಅಣ್ಣ-ಅತ್ತಿಗೆಯರ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆಯಿರಿ.
  • ದೇವತಾರಾಧನೆ: ಸೂರ್ಯ ದೇವನಿಗೆ ಅರ್ಘ್ಯ ಸಮರ್ಪಿಸಿ ಪ್ರಾರ್ಥಿಸಿದ ಬಳಿಕ, ವಿಘ್ನ ನಿವಾರಕನಾದ ಗಣಪತಿಯನ್ನು ಪೂಜಿಸಿ.
  • ಗುರು ದರ್ಶನ: ನಿಮ್ಮ ಆಧ್ಯಾತ್ಮಿಕ ಗುರುಗಳಿದ್ದರೆ, ಖುದ್ದಾಗಿ ಭೇಟಿಯಾಗಿ ಅವರ ಪಾದಪೂಜೆ ಮಾಡಿ ಕೃತಜ್ಞತೆ ಸಲ್ಲಿಸಿ.
  • ದಾನ-ಧರ್ಮ: ವೇದವ್ಯಾಸರ ಭಾವಚಿತ್ರ ಅಥವಾ ಮೂರ್ತಿಗೆ ಪುಷ್ಪಾರ್ಚನೆ ಮಾಡಿ. ಬ್ರಾಹ್ಮಣರಿಗೆ ಅಥವಾ ಗುರುಗಳಿಗೆ ವಸ್ತ್ರ, ಪಾದರಕ್ಷೆ, ಹಣ್ಣು ಹಾಗೂ ದಕ್ಷಿಣೆಯನ್ನು ನೀಡಿ ಗೌರವಿಸಿ. ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಮಾಡುವುದು ಕೂಡ ಈ ದಿನ ವಿಶೇಷ ಫಲದಾಯಕ.

ಗುರು ಪೂರ್ಣಿಮೆಯಂದು ಶ್ರೀ ರಾಘವೇಂದ್ರ ಸ್ವಾಮಿಗಳ ವಿಶೇಷ ಆರಾಧನೆ

ಸನಾತನ ಧರ್ಮದಲ್ಲಿ ಗುರುವಿನ ಕೃಪೆಗೆ ಪಾತ್ರರಾಗಲು ಈ ದಿನ ಅತ್ಯಂತ ಸೂಕ್ತ. ಕಲ್ಪವೃಕ್ಷ, ಕಾಮಧೇನುವಿನಂತಿರುವ ಜಗದ್ಗುರು ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಗುರು ಪೂರ್ಣಿಮೆಯಂದು ಆರಾಧಿಸುವುದರಿಂದ ಸಕಲ ಕಷ್ಟಗಳು ದೂರವಾಗಿ, ಜ್ಞಾನ, ನೆಮ್ಮದಿ ಮತ್ತು ಕೌಟುಂಬಿಕ ಸಮೃದ್ಧಿ ಲಭಿಸುತ್ತದೆ.

ರಾಯರ ಪೂಜಾ ವಿಧಾನ:

  1. ಸಿದ್ಧತೆ: ಮಂಗಳಸ್ನಾನದ ನಂತರ ಗುರುಗ್ರಹಕ್ಕೆ ಹಾಗೂ ರಾಯರಿಗೆ ಪ್ರಿಯವಾದ ಹಳದಿ ಬಣ್ಣದ ವಸ್ತ್ರವನ್ನು ಧರಿಸಿ.
  2. ಅಲಂಕಾರ: ಪೂಜಾ ಸ್ಥಳವನ್ನು ಶುಚಿಗೊಳಿಸಿ, ರಾಯರ ಭಾವಚಿತ್ರ ಅಥವಾ ಪ್ರತಿಮೆಗೆ ತುಳಸಿ ದಳ ಹಾಗೂ ಹಳದಿ ಹೂವುಗಳಿಂದ (ಸೇವಂತಿಗೆ, ಕನಕಾಂಬರ) ಅಲಂಕರಿಸಿ.
  3. ದೀಪಾರಾಧನೆ ಮತ್ತು ನೈವೇದ್ಯ: ಹಸುವಿನ ತುಪ್ಪದ ದೀಪ ಬೆಳಗಿ. ರಾಯರಿಗೆ ಇಷ್ಟವಾದ ರವೆ ಹಲ್ವಾ, ಪಾಯಸ, ಅಥವಾ ತುಪ್ಪದ ದೋಸೆ/ಅನ್ನವನ್ನು ಹಣ್ಣುಗಳು ಹಾಗೂ ತಾಂಬೂಲದೊಂದಿಗೆ ನೈವೇದ್ಯ ಮಾಡಿ.
  4. ಮಂತ್ರ ಪಠಣ: ‘ಪೂಜ್ಯಾಯ ರಾಘವೇಂದ್ರಾಯ…’ ಎಂಬ ಶ್ರೀ ರಾಘವೇಂದ್ರ ಸ್ತೋತ್ರವನ್ನು ಭಕ್ತಿಯಿಂದ ೧೦೮ ಅಥವಾ ಕನಿಷ್ಠ ೯ ಬಾರಿಯಾದರೂ ಪಠಿಸಿ, ಅಂತಿಮವಾಗಿ ಮಹಾ ಮಂಗಳಾರತಿ ಬೆಳಗಿ ಪ್ರಸಾದ ಸ್ವೀಕರಿಸಿ.

ಪಠಿಸಬಹುದಾದ ಪ್ರಮುಖ ಮಂತ್ರಗಳು

ಗುರು ಪೂರ್ಣಿಮೆಯಂದು ಈ ಕೆಳಗಿನ ಮಂತ್ರಗಳನ್ನು ಜಪಿಸುವುದರಿಂದ ಮಾನಸಿಕ ಶಾಂತಿ ಹಾಗೂ ಆಧ್ಯಾತ್ಮಿಕ ಶಕ್ತಿ ವೃದ್ಧಿಸುತ್ತದೆ:

  • ಓಂ ಗುರುವೇ ನಮಃ
  • ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ||
  • ಓಂ ಗಂ ಗಣಪತಯೇ ನಮಃ
  • ಓಂ ನಮಃ ಶಿವಾಯ
  • ಓಂ ನಮೋ ಭಗವತೇ ವಾಸುದೇವಾಯ
  • ಓಂ ನಮೋ ನಾರಾಯಣಾಯ
  • ಅಚ್ಯುತಂ ಕೇಶವಂ ಕೃಷ್ಣ ದಾಮೋದರಂ | ರಾಮ ನಾರಾಯಣಂ ಜಾನಕೀ ವಲ್ಲಭಂ ||
  • ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ | ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ||
  • ‘ಪೂಜ್ಯಾಯ ರಾಘವೇಂದ್ರಾಯ…’

ಈ ದಿನ ಮಾಡಬಹುದಾದ ಇತರ ಸತ್ಕಾರ್ಯಗಳು

  • ದೇವಾಲಯ, ಮಠ ಅಥವಾ ಆಶ್ರಮಗಳಿಗೆ ಭೇಟಿ ನೀಡಿ ಧ್ಯಾನ ಮಾಡುವುದು.
  • ಆಧ್ಯಾತ್ಮಿಕ ಕಾರ್ಯಾಗಾರ, ಸತ್ಸಂಗ ಅಥವಾ ಯೋಗ ಶಿಬಿರಗಳಲ್ಲಿ ಭಾಗವಹಿಸುವುದು.
  • ಭಗವದ್ಗೀತೆ, ಉಪನಿಷತ್ತು ಹಾಗೂ ಮಹಾಭಾರತದಂತಹ ಪವಿತ್ರ ಗ್ರಂಥಗಳ ಪಾರಾಯಣ.
  • ಬಡವರು ಮತ್ತು ನಿರ್ಗತಿಕರಿಗೆ ಅನ್ನದಾನ, ಪುಸ್ತಕ ಹಾಗೂ ವಸ್ತ್ರದಾನ ಮಾಡುವುದು.
  • ನಿಮ್ಮ ಬದುಕಿಗೆ ದಾರಿ ತೋರಿದ ಎಲ್ಲಾ ಶಿಕ್ಷಕರಿಗೂ ಖುದ್ದಾಗಿ ಅಥವಾ ಸಂದೇಶದ ಮೂಲಕ ಕೃತಜ್ಞತೆ ಸಲ್ಲಿಸುವುದು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *