ಟೈಕೊಂಡೊ ಕ್ರೀಡೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಸನ: ಕೆ.ಎಸ್. ನವೀನ್,

ಚಿತ್ರದುರ್ಗ ಆ. 08

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಟೈಕೊಂಡೊ ಕೇವಲ ಒಂದು ಸಮರ ಕಲೆಯಷ್ಟೇ ಅಲ್ಲದೆ ಮಕ್ಕಳ ಸರ್ವಾಂಗೀಣ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಸೂಕ್ತವಾದ ಕ್ರೀಡೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಪ್ರತಿಪಾದಿಸಿದರು.

ನಗರದ ಚಳ್ಳಕೆರೆ ರಸ್ತೆಯ ಶ್ರೀ ವಿನಾಯಕ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನದ ಕರ್ನಾಟಕ ಟೈಕೊಂಡೊ ಅಸೋಸಿಯೇಷನ್ (ರಿ.) ವತಿಯಿಂದ 41ನೇ ರಾಜ್ಯ ಮಟ್ಟದ ಸಬ್‍ಜ್ಯೂನಿಯರ್, ಜ್ಯೂನಿಯರ್, ಮತ್ತು ಸೀನಿಯರ್, 10ನೇ ಕೆಡಿಟ್ ಕೂರ್ಗಿ ಮತ್ತು 14ನೇ ಪೂಂಸೆ ಮತ್ತು 3ನೇ ಪಾರಾ ಟೈಕೊಂಡೊ ಪಂದ್ಯಾವಳಿ-2026ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರಿಯಾ ಮೂಲದ ಟೈಕೊಂಡೊ ಆತ್ಮರಕ್ಷಣೆಗಾಗಿ ಬೆಳೆದುಬಂದ ಪ್ರಮುಖ ಕ್ರೀಡೆಯಾಗಿದೆ. ಕೈ ಮತ್ತು ಕಾಲುಗಳ ಸೂಕ್ತ ಸಮನ್ವಯದ  ಮೂಲಕ ಯಾವುದೇ ಆಯುಧವಿಲ್ಲದೆ ಎದುರಾಳಿಯನ್ನು ಎದುರಿಸುವ ಶಕ್ತಿ ಈ ಕ್ರೀಡೆಯಲ್ಲಿದೆ ಎಂದು ವಿವರಿಸಿದರು.

ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಅಗತ್ಯವಿರುವ ಚಾಲನಾ ಕೌಶಲಗಳು ಸಂವೇದನಾ ಕೌಶಲಗಳು ಹಾಗೂ ದೈಹಿಕ ಸಮನ್ವಯತೆಯನ್ನು  ವೃದ್ಧಿಸಲು ಟೈಕೊಂಡೊ ಉತ್ತಮ ತಡಿಪಾಯ ಒದಗಿಸುತ್ತದೆ. ದಿನಪೂರ್ತಿ ಕ್ರಿಯಾಶೀಲವಾಗಿರಲು ಮತ್ತು ದೈಹಿಕ-ಮಾನಸಿಕ ಶಿಸ್ತು ಬೆಳೆಸಿಕೊಳ್ಳಲು ಇದು ಸಹಕಾರಿಯಾಗಿದೆ ಎಂದ ಅವರು. ಕೇಂದ್ರ ಸರ್ಕಾರದ ‘ಫಿಟ್ ಇಂಡಿಯಾ’ ಹಾಗೂ ‘ಖೇಲೋ ಇಂಡಿಯಾ’ ಯೋಜನೆಗಳ ಬಗ್ಗೆ ಉಲ್ಲೇಖಿಸಿದ ಅವರು, ಕ್ರೀಡೆ ಮತ್ತು ಆರೋಗ್ಯದ ಕುರಿತು ಜಾಗೃತಿ ಹೆಚ್ಚಾಗುತ್ತಿದ್ದು, ದೇಶಾದ್ಯಂತ ಟೈಕೊಂಡೊ ಕ್ರೀಡೆ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

ಟೈಕೊಂಡೊ ಕೇವಲ ಒಂದು ಸಮರ ಕಲೆಯಷ್ಟೇ ಅಲ್ಲದೆ ಮಕ್ಕಳ ಸರ್ವಾಂಗೀಣ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಸೂಕ್ತವಾದ ಕ್ರೀಡೆಯಾಗಿದೆ ನಿರಂತರವಾಗಿ ಟೈಕೊಂಡೊ ತರಬೇತಿ ನೀಡುತ್ತಿರುವ ತರಬೇತುದಾರರಾದ ಅನಿತಾ ಹಾಗೂ ಸುನೀತ ಅವರ ಸಮರ್ಪಣಾ ಭಾವ ಮತ್ತು ಶ್ರಮವನ್ನು ಅವರು ವಿಶೇಷವಾಗಿ ಶ್ಲಾಘಿಸಿ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶ ಮತ್ತು ರಾಜ್ಯಕ್ಕೆ ಕೀರ್ತಿ ತರಲಿ ಎಂದು ಆಶಿಸಿ, ಟೈಕೊಂಡೊ ಶೈಲಿಯಲ್ಲೇ ಗೌರವ ಸಲ್ಲಿಸಿದರು.

ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ಟಿ. ಕೃಷ್ಣಮೂರ್ತಿ ಮಾತನಾಡಿ, ಈ ಹಿಂದೆ ರಾಜರ ಕಾಲದಲ್ಲಿ ಗರಡಿ ಮನೆಗಳಲ್ಲಿ ಪೈಲ್ವಾನರನ್ನು ತಯಾರು ಮಾಡಲಾಗುತ್ತಿತ್ತು. ಆಗ ಕೇವಲ ಗಂಡು ಮಕ್ಕಳಿಗೆ ಮಾತ್ರ ಅವಕಾಶವಿತ್ತು. ಆದರೆ ಇಂದು ಹೆಣ್ಣುಮಕ್ಕಳು ಸಹ ಗಂಡುಮಕ್ಕಳಿಗೆ ಸಮಾನವಾಗಿ ಕರಾಟೆ ಹಾಗೂ ಸಮರಕಲೆಗಳಲ್ಲಿ ತೊಡಗಿಸಿಕೊಂಡು ಆತ್ಮರಕ್ಷಣೆ ಕಲಿಯುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.

ಮಕ್ಕಳನ್ನು ಬಲಿಷ್ಠರನ್ನಾಗಿ, ಶಿಸ್ತಿನಿಂದ ಬೆಳೆಸಲು ಮತ್ತು ಅವರ ಆರೋಗ್ಯ ಉತ್ತಮವಾಗಿರಲು ಪೋಷಕರು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ರಾಜಕೀಯ ನಾಯಕರು ಹಾಗೂ ಜನಪ್ರತಿನಿಧಿಗಳು ಇಂತಹ ಸ್ಥಳೀಯ ಕ್ರೀಡಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕ್ರೀಡಾಪಟುಗಳ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿರುವುದು ಸಮಾಜಕ್ಕೆ ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟು ಕ್ರೀಡಾಪಟುಗಳು ಕೇವಲ ಸ್ಪರ್ಧೆಗಾಗಿ ಮಾತ್ರವಲ್ಲದೆ, ಸ್ವಯಂ ರಕ್ಷಣೆ ಹಾಗೂ ದೇಶದ ಬಲಿಷ್ಠತೆಗೆ ಕೊಡುಗೆ ನೀಡಲು ಕ್ರೀಡೆಯಲ್ಲಿ ನಿರತರಾಗಬೇಕು ಎಂದು ಕರೆ ನೀಡಿ ಕ್ರೀಡಾ ಚಟುವಟಿಕೆಗಳ ಏಳಿಗೆಗೆ ತಮ್ಮಿಂದ ಯಾವುದೇ ರೀತಿಯ ಸಹಕಾರ ಹಾಗೂ ಬೆಂಬಲ ಅಗತ್ಯವಿದ್ದಲ್ಲಿ ನೀಡಲು ಸಿದ್ಧರಿರುವುದಾಗಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಟೈಕೊಂಡೋ ಸಂಸ್ಥೆಯ ಅಧ್ಯಕ್ಷರಾದ ಜೆ. ತಿರುಮಾಲ್ ಕಾರ್ಯದರ್ಶಿ ಬಿ.ಎನ್. ವೆಂಕಟೇಶ್ ಕಲಾವಿದ ನಾಗರಾಜ್ ಬೇದ್ರೇ, ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳಾದ ರಾಜಕುಮಾರ್, ಅರುಣ್ ರಾಥೋಡ್, ಶ್ರೀಕಾಂತ್, ದುಮ್ಮಿ ಕಾಂಪ್ಲೆಕ್ಸ್, ಮಾಲೀಕರಾದ ಶ್ರೀಮತಿ ದುಮ್ಮಿ ಚಿನ್ನಮ್ಮ ತಿಪ್ಪೇಸ್ವಾಮಿ ಚಿತ್ರದುರ್ಗ ಜಿಲ್ಲಾ ಟೈಕೊಂಡೋ ಸಂಸ್ಥೆಯ ಅಧ್ಯಕ್ಷರಾದ ಟಿ. ಮಂಜಪ್ಪ, ಚಿತ್ರದುರ್ಗ ಜಿಲ್ಲಾ ಟೈಕೊಂಡೋ ಸಂಸ್ಥೆಯ ಖಜಾಂಚಿ ಜಿಲ್ಲೆಯ ಸಹ ಕಾರ್ಯದರ್ಶಿ ಶ್ರೀಮತಿ ಎಂ. ಅನಿತ ಮಹಂತೇಶ್, ಕಾರ್ಯದರ್ಶಿ ಶ್ರೀಮತಿ ಎಂ. ಸುನೀತಾ ಪ್ರವೀಣ್ ಕುಮಾರ್ ಭಾಗವಹಿಸಿದ್ದರು. 

ಈ ಕ್ರೀಡಾಕೂಟದಲ್ಲಿ ರಾಜ್ಯದ ಸುಮಾರು 13 ಜಿಲ್ಲೆಗಳಿಂದ ಸುಮಾರು 300 ಕ್ರೀಡಾಪಟುಗಳು ಹಾಗೂ ತೀರ್ಪುಗಾರರು ಪೋಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *