ಶಿವಸಿಂಪಿ ಸಮಾಜದ ರಜತ ಮಹೋತ್ಸವ: ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಕೆ.ಎಸ್. ನವೀನ್ ಕರೆ.

ಚಿತ್ರದುರ್ಗ ಅ. 9

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಶಿವಸಿಂಪಿ ಸಮುದಾಯವು ತನ್ನ ಉದ್ದೇಶಗಳ ಸಾಧನೆಗೆ ದಿಟ್ಟ ಹೆಜ್ಜೆಗಳನ್ನಿಡುತ್ತಾ, ಸಮಾಜವನ್ನು ಸಂಘಟಿಸುವ ಜೊತೆಗೆ ಮುಂದಿನ ಪೀಳಿಗೆಗೆ ಸಂಸ್ಕಾರ ಹಾಗೂ ಪರಿಚಯವನ್ನು ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದವತಿಯಿಂದ ಭಾನುವಾರ ಮದಕರಿ ವೃತ್ತದಲ್ಲಿನ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುಲಗುರು ಶ್ರೀ ಶಿವದಾಶಿಮಯ್ಯ ಜಯಂತಿ, ರಜತ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮುದಾಯದ ಮೂಲ ಪುರುಷರಾದ ಶಿವದಾಸಿಮಯ್ಯ ಅವರ ಕಾಯಕ ನಿಷ್ಠೆ ಮತ್ತು ತತ್ವಗಳನ್ನು ಸಮಾಜ ಅನುಸರಿಸಿಕೊಂಡು ಬರುತ್ತಿದೆ. ಹಲವು ಸಮುದಾಯಗಳು ತಮ್ಮ ಆರಾಧ್ಯ ದೈವಗಳ ಹೆಸರನ್ನು ಇಟ್ಟುಕೊಂಡಿದ್ದರೂ ಅವರ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿಲ್ಲ. ಆದರೆ ಶಿವಸಿಂಪಿ ಸಮುದಾಯವು ಶಿವದಾಸಿಮಯ್ಯ ಅವರ ಆದರ್ಶಗಳನ್ನು ತನ್ನ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಿದೆ ಎಂದು ತಿಳಿಸಿದರು.

ಮಕ್ಕಳಿಗೆ ಶಾಲಾ ಹಂತದಲ್ಲಿ ಕೇವಲ ಉಡುಪಿನ ಸ್ಪರ್ಧೆಗಳಿಗೆ ಸೀಮಿತಗೊಳಿಸದೆ, ಸಮಾಜಕ್ಕೆ ಅನುಕೂಲಕರ ವಾದ ಕಲುಷಿತವಿಲ್ಲದ ವಾತಾವರಣ ನಿರ್ಮಿಸಬೇಕು. ಶಿಕ್ಷಣದಷ್ಟೇ ಸಂಸ್ಕಾರಕ್ಕೂ ಪ್ರಾಮುಖ್ಯತೆ ನೀಡುವ ಹೊಣೆಗಾರಿಕೆ ಪೋಷಕರ ಮೇಲಿದೆ. ಮುಂಬರುವ 50 ವರ್ಷಗಳ ಸುವರ್ಣ ಮಹೋತ್ಸವದ ವೇಳೆಗೆ ಇಂದಿನ ಯುವ ಪೀಳಿಗೆ ಸಮಾಜವನ್ನು ಮುನ್ನಡೆಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿ ಶಿವಸಿಂಪಿ ಸಮುದಾಯದ ರಜತ ಮಹೋತ್ಸವವು ಕೇವಲ ಆಚರಣೆಗೆ ಸೀಮಿತವಾಗದೆ, ಮುಂದಿನ ಪೀಳಿಗೆಗೆ ಸಂಸ್ಕಾರ, ಶಿಕ್ಷಣ ಹಾಗೂ ಉನ್ನತ ಸಾಧನೆಗೆ ಅಗತ್ಯವಿರುವ ಪ್ರೋತ್ಸಾಹ ನೀಡುವ ಮೂಲಕ ಸಂಘಟಿತ ಸಮುದಾಯವನ್ನು ಕಟ್ಟುವ ತೀರ್ಮಾನ ಮಾಡಬೇಕಿದೆ ಎಂದರು.

ಶಿವಸಿಂಪಿ ಸಮುದಾಯವು ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನು ಒಗ್ಗೂಡಿಸಿ, ಭೇದಭಾವವಿಲ್ಲದೆ ಪ್ರೀತಿಯಿಂದ ಸಂಘಟಿಸುವ ಕೆಲಸ ಮಾಡುತ್ತಿದೆ. ಬಸವಣ್ಣನವರಿಗೆ ವಸ್ತ್ರವನ್ನು ನೇಯ್ದು ಕೊಟ್ಟ ಕೀರ್ತಿ ಶಿವದಾಸಿಮಯ್ಯ ಅವರಿಗೆ ಸಲ್ಲುತ್ತದೆ ಎಂದು ಅವರು ಮುಂದಿನ ಐದು ವರ್ಷಗಳಲ್ಲಿ ಸಮುದಾಯದಿಂದ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಹಾಗೂ ಉನ್ನತ ಹುದ್ದೆಯ ವ್ಯಕ್ತಿಗಳನ್ನು ರೂಪಿಸಲು ಅಗತ್ಯ ಪ್ರೋತ್ಸಾಹ ಹಾಗೂ ಪೋಷಣೆ ನೀಡುವ ಸಂಕಲ್ಪ ಮಾಡಬೇಕು ಅಂತಿಮವಾಗಿ ಶರಣರ ಕಾಯಕವೇ ಕೈಲಾಸ ಎಂಬ ತತ್ವವನ್ನು ಶಿವಸಿಂಪಿ ಸಮುದಾಯವು ಸದಾ ಎತ್ತಿಹಿಡಿಯುತ್ತಿದೆ ಎಂದು ತಿಳಿಸಿದರು.

ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಶಿವಸಿಂಪಿ ಸಮಾಜವು ಕಳೆದ 25 ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸಂಘಟನೆಯ ಕೊರತೆ ಕಂಡುಬರುತ್ತಿದ್ದು, ಜನಸಂಖ್ಯೆ ಮತ್ತು ವ್ಯಾಪಾರಸ್ಥರ ಸಂಖ್ಯೆ ಕಡಿಮೆಯಾಗುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿ ಆದಾಗ್ಯೂ, ಸಮಾಜದ ಮಹಿಳೆಯರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.

ಸಮಾಜಕ್ಕೆ ಸ್ವಂತ ಕಟ್ಟಡ ಮತ್ತು ಜಾಗದ ಅಗತ್ಯತೆಯನ್ನು ಒತ್ತು ನೀಡಿ ಮಾತನಾಡಿದ ಅವರು, ಈ ಹಿಂದೆ ತಾವು ಶಾಸಕರಾಗಿದ್ದಾಗ ವೀರಶೈವ ಸಮಾಜದ ಸ್ಮಶಾನ ಹಾಗೂ ಶವಸಂಸ್ಕಾರಕ್ಕಾಗಿ ಜೋಗಿಮಟ್ಟಿ ರಸ್ತೆಯಲ್ಲಿ ಸರ್ಕಾರದಿಂದ ಸೂಕ್ತ ಜಾಗವನ್ನು ಒದಗಿಸಿಕೊಟ್ಟಿರುವುದಾಗಿ ತಿಳಿಸಿದರು. ನಗರ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ‘ಸಿಎ’ ಸೈಟ್ ಪಡೆದುಕೊಂಡು ಸಮಾಜದ ಸ್ವಂತ ಭವನ, ಕಚೇರಿ ಮತ್ತು ಗ್ರಂಥಾಲಯ ನಿರ್ಮಿಸಿಕೊಳ್ಳಲು ಸಮಾಜದ ಮುಖಂಡರಿಗೆ ಸಲಹೆ ನೀಡಿದರು. ಈ ಕಾರ್ಯಕ್ಕೆ ಸೂಕ್ತ ಅನುದಾನ ಹಾಗೂ ಶಾಸಕರ/ಸಂಸದರ ನಿಧಿಯಿಂದ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.

ಚಿತ್ರದುರ್ಗ ನಗರದ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ಶಿವಸಿಂಪಿ ಸಮಾಜದ ವ್ಯಾಪಾರಿಗಳು ಮತ್ತು ಶ್ರಮಿಕರ ಕೊಡುಗೆ ಅಪಾರವಾದುದು. ಹಿಂದೆ ಚಿತ್ರದುರ್ಗದ ದೊಡ್ಡಪೇಟೆ ಭಾಗದಲ್ಲಿ ಸಮಾಜದ ಜವಳಿ ಮತ್ತು ಆಭರಣ ವ್ಯಾಪಾರಿಗಳು ಪ್ರಮುಖ ಪಾತ್ರವಹಿಸುತ್ತಿದ್ದರೆಂದು ತಿಳಿಸಿ. ಶಿವಸಿಂಪಿ ಸಮಾಜವು ಚಿತ್ರದುರ್ಗದ ಐತಿಹಾಸಿಕ ಮತ್ತು ಆರ್ಥಿಕ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದ ನಾಯಕರು, ಇನ್ಮುಂದೆ ಸಮಾಜದ ಪದಾಧಿಕಾರಿಗಳು ಹಾಗೂ ಯುವಕರು ಚುರುಕಾಗಿ ಸಂಘಟಿತ ರಾಗಿ, ಸಮಾಜಕ್ಕೆ ಸ್ವಂತ ಕಟ್ಟಡ ಮತ್ತು ಭವನ ನಿರ್ಮಿಸಿಕೊಳ್ಳುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸ ಬೇಕೆಂದು ತಿಪ್ಪಾರೆಡ್ಡಿ ಕರೆ ನೀಡಿದರು.

ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಮಲ್ಲಿಕಾರ್ಜನ ಜವಳಿ ಸಮಾಜದ ಸಂಘಟನೆಯ ಬಗ್ಗೆ ಮಾತನಾಡಿ, ಶಿವಸಿಂಪಿ ಸಮುದಾಯವು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ರಂಗಗಳಲ್ಲಿ ಮುನ್ನಡೆಯಲು ಬಲವಾದ ಮತ್ತು ಸುಸಂಘಟಿತ ಸಂಸ್ಥೆಯ ಅಗತ್ಯವಿದೆ. ಕಳೆದ 25 ವರ್ಷಗಳಿಂದ ಚಿತ್ರದುರ್ಗವನ್ನು ಕೇಂದ್ರವಾಗಿರಿಸಿ ಕೊಂಡು ಸಾಧನೆಯ ಹಾದಿಯಲ್ಲಿ ಸಾಗಿದ್ದರೂ, ಆಕಾಂಕ್ಷಿತ ಮಟ್ಟದ ಸಂಘಟನೆ ಇನ್ನೂ ಸಾಧ್ಯವಾಗಿಲ್ಲ. ಸಮುದಾಯದ ಜನರು ತಮ್ಮ ಸ್ವಂತ ಪ್ರತಿಭೆಯಿಂದ ದೊಡ್ಡ ದೊಡ್ಡ ಶೈಕ್ಷಣಿಕ, ಮತ್ತು ಬ್ಯಾಂಕಿಂಗ್ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಆದರೆ, ಇಡೀ ಶಿವಸಿಂಪಿ ಸಮುದಾಯವನ್ನು ಒಂದೇ ಸೂರಿನಡಿ ತರುವ ಬಲವಾದ ಸ್ವಂತ ಸಂಸ್ಥೆಯನ್ನು ಬಲಪಡಿಸುವಲ್ಲಿ ಇನ್ನೂ ಪ್ರಗತಿ ಸಾಧಿಸಬೇಕಿದೆ ಎಂದು ಹೇಳಿದರು.

ಬಟ್ಟೆ ತಯಾರಿಕೆ ಮತ್ತು ಕಾಯಕ ಸಿದ್ಧಾಂತವು ಶಿವಸಿಂಪಿ ಸಮುದಾಯದ ಪವಿತ್ರ ಹಿನ್ನೆಲೆಯಾಗಿದೆ. ಅಜ್ಞಾನವನ್ನು ಕತ್ತರಿಸಿ, ಸುಜ್ಞಾನವನ್ನು ಜೋಡಿಸುವ ಕತ್ತರಿಯಂತೆ ಹಾಗೂ ಭಕ್ತಿಯೆಂಬ ದಾರದಿಂದ ಸಮಾಜವನ್ನು ಬೆಸೆಯುವ ಕಾರ್ಯವನ್ನು ಸಮುದಾಯದ ಕಾಯಕ ಪ್ರತಿನಿಧಿಸುತ್ತದೆ. ಸಮುದಾಯದ ಜನಸಂಖ್ಯಾ ಬಲ ಹಾಗೂ ಪ್ರತಿಭೆ ಹೆಚ್ಚಾಗಿದ್ದರೂ, ಅಸಂಘಟಿತ ಸ್ಥಿತಿಯಿಂದಾಗಿ ಸೂಕ್ತ ಗುರುತಿಸುವಿಕೆ ಸಿಗುತ್ತಿಲ್ಲ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕದಾದ್ಯಂತ ಹಂಚಿಹೋಗಿರುವ ಸಮುದಾಯದ ಜನರನ್ನು ಒಗ್ಗೂಡಿಸುವ ತುರ್ತು ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಅವರು, ಸಮುದಾಯದ ಶ್ರೇಯಸ್ಸಿಗೆ ಶ್ರಮಿಸಿದ ಹಿರಿಯರ ಮತ್ತು ಸಾಧಕರ ಕೊಡುಗೆಗಳನ್ನು ನೆನಪಿಸಿ ಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ತಮ್ಮ ಪೂರ್ವಜರ ಮತ್ತು ಸಮಾಜ ಸೇವಕರ ಸಾಧನೆಗಳನ್ನು ಗೌರವಿಸದ ಸಮಾಜಗಳು ಅಳಿವಿನತ್ತ ಸಾಗುತ್ತವೆ. ಆದ್ದರಿಂದ ಇಡೀ ರಾಜ್ಯದ ಶಿವಸಿಂಪಿ ಸಮುದಾಯದ ಹಿರಿಯರು ಹಾಗೂ ಸಾಧಕರ ಮಾಹಿತಿಯನ್ನು ಒಳಗೊಂಡ ವಿಶೇಷ ಸ್ಮರಣ ಸಂಚಿಕೆಯನ್ನು ರೂಪಿಸಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶಿವಮೊಗ್ಗದ ಬೆಕ್ಕಿನ ಕಲ್ಮಠದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು,. ಸ್ಮರಣ ಸಂಚಿಕೆ ಯನ್ನು ಯೋಗವನ ಬೆಟ್ಟದ ಅಧ್ಯಕ್ಷರು, ಶ್ರೀ ಬೃಹನ್ಮಠ ಮತ್ತು ಎಸ್.ಜೆ.ಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು. ಸಮ್ಮುಖವನ್ನು ತುಮಕೂರು ಜಿಲ್ಲೆಯ ತಂಗನಹಳ್ಳಿಯ ಶ್ರೀ ಅನ್ನಪೂರ್ಣೇಶ್ವರಿ ಸುಕ್ಷೇತ್ರದ ಶ್ರೀ ಬಸವ ಮಹಾಲಿಂಗಸ್ವಾಮಿಗಳು ವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಚಿತ್ರದುರ್ಗ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಪಿ.ಎಸ್. ಶಂಭುಲಿಂಗಪ್ಪ ವಹಿಸಿದ್ದರು. ಮಾಜಿ ಶಾಸಕರುಗಳಾದ ಎಸ್.ಕೆ. ಬಸವರಾಜನ್, ಜಿಲ್ಲಾ ಲಿಂ.ಶಿ.ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಜಯದೇವಮೂರ್ತಿ. ಕಲ್ಬುರ್ಗಿಯ ಕಲ್ಯಾಣ ಕರ್ನಾಟಕ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ವಿಜಯಕುಮಾರ್ ಹಳಕಟ್ಟಿ ಬೆಂಗಳೂರಿನ ಶಿವಶಿಂಪಿ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷರಾದ ಗಂಗಾಧರ ಯಾವಗಲ್, ವಿಜಯಪುರದ ಶಿವ ಶಿಂಪಿ ಸಮಾಜದ ಅಧ್ಯಕ್ಷರಾದ ಎಸ್.ಎಂ. ಸಿಂದಗಿ, ಸೊಲ್ಲಾಪುರದ ಶಿವದಾಸಿಮಯ್ಯ ಶಿವಶಿಂಪಿ ಸಮಾಜದ ಟ್ರಸ್ಟಿ, ಶಿವಶಂಕರ (ರಾಜು) ಚೊಳ್ಳೆ ಶಿವದಾಸಿಮಯ್ಯ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ದಯಾನಂದ ವಿಜಾಪುರೆ ಚಿತ್ರದುರ್ಗ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಕಾರ್ಯದರ್ಶಿ ಇ.ಕೆ. ಮಲ್ಲಿಕಾರ್ಜನ್ ಹಾಗೂ ಉಪಾಧ್ಯಕ್ಷರಾದ ಡಿ.ವಿ.ಮುರಗೇಶ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *