ಹೊಳಲ್ಕೆರೆ ಶಾಸಕ ಚಂದ್ರಪ್ಪನವರನ್ನು ಮುಂದಿನ ದಿನಗಳಲ್ಲಿ ಮಂತ್ರಿ ಮಾಡುವ ಜವಾಬ್ದಾರಿ ಇದೆ: ಜಿ.ಎಂ. ಸಿದ್ದೇಶ್ವರ.
ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಭೀಮಸಮುದ್ರ: ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪನವರನ್ನು ಮುಂದಿನ ದಿನಗಳಲ್ಲಿ ಮಂತ್ರಿಯನ್ನಾಗಿ ಮಾಡುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ರಾಜಕಾರಣಿ ಜಿ.ಎಂ. ಸಿದ್ದೇಶ್ವರ ಹೇಳಿದರು.
ಭೀಮಸಮುದ್ರ ಗ್ರಾಮದಲ್ಲಿ ಡಾ. ಜಿ.ಎಂ. ಸಿದ್ದೇಶ್ವರ ಹಾಗೂ ಗಾಯತ್ರಿ ಸಿದ್ದೇಶ್ವರ ಅವರ 50ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೆ ಆಗಮಿಸಿ ದಂಪತಿಗೆ ಶುಭ ಹಾರೈಸಿದ ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ಮಾತನಾಡಿ, “ಸಿದ್ದೇಶಣ್ಣ ಅವರು ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ, ಒಂದು ಬಾರಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ನನ್ನ ರಾಜಕೀಯ ಗುರುಗಳು. ಅವರ 50ನೇ ವಿವಾಹ ವಾರ್ಷಿಕೋತ್ಸವದ ಈ ಶುಭ ಸಂದರ್ಭದಲ್ಲಿ ಅವರ ಆಶೀರ್ವಾದ ಪಡೆದುಕೊಳ್ಳುತ್ತಿರುವುದು ಸಂತಸದ ಸಂಗತಿ” ಎಂದರು.
“ಹೊಳಲ್ಕೆರೆ ತಾಲೂಕಿನ 37 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ದಿನ ಸಿದ್ದೇಶ್ವರ ಅವರ ಆಶೀರ್ವಾದ ಪಡೆದು ಹೊಳಲ್ಕೆರೆ ತಾಲೂಕಿನ ಚಿಕ್ಕಯ್ಯಗಟ್ಟಿ ಗ್ರಾಮದ ಸಮೀಪದ ತೂಬಿಗೆ ನೀರು ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಸುಮಾರು 75 ವರ್ಷಗಳಿಂದ ಹಿರಿಯರು ಕಂಡಿದ್ದ ಕನಸು ನನಸಾಗುವಂತಹ ಸುಸಂದರ್ಭ ಇಂದು ಒದಗಿ ಬಂದಿದೆ” ಎಂದು ಹೇಳಿದರು.
“ನನ್ನನ್ನು ಮುಂದಿನ ದಿನಗಳಲ್ಲಿ ಮಂತ್ರಿಯನ್ನಾಗಿ ಮಾಡುವುದಾಗಿ ಸಿದ್ದೇಶಣ್ಣ ಅವರು ಹೇಳಿದ್ದಾರೆ. ಅವರು ನೀಡಿರುವ ಈ ಮಾತಿಗೆ ನಾನು ಚಿರಋಣಿಯಾಗಿದ್ದೇನೆ. ನನ್ನನ್ನು ಭಾರತೀಯ ಜನತಾ ಪಕ್ಷಕ್ಕೆ ಕರೆತಂದು, ಪಕ್ಷದ ಟಿಕೆಟ್ ಕೊಡಿಸಿ ಮೂರು ಬಾರಿ ಶಾಸಕನನ್ನಾಗಿ ಮಾಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ” ಎಂದು ಚಂದ್ರಪ್ಪ ಸ್ಮರಿಸಿದರು.
“ನಾನು ಹೊಳಲ್ಕೆರೆ ಕ್ಷೇತ್ರದ ಶಾಸಕ ಮಾತ್ರವಲ್ಲ. ನಾನು ಈ ಹಿಂದೆ ಪ್ರತಿನಿಧಿಸಿದ ಕ್ಷೇತ್ರಗಳಲ್ಲಿಯೂ ನನ್ನ ಅಭಿಮಾನಿಗಳಿದ್ದಾರೆ. ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಅವರು ನನ್ನನ್ನು ಆಹ್ವಾನಿಸುತ್ತಾರೆ. ರಾಜಕಾರಣಿಯಾಗಿ ಅವರು ವೋಟರ್ಸ್, ನಾನು ಲೀಡರ್ ಎಂಬ ಯಾವುದೇ ವ್ಯತ್ಯಾಸವಿಲ್ಲ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಪ್ರೀತಿ, ಅಭಿಮಾನದಿಂದ ಇದ್ದೇವೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಜಿ.ಎಸ್. ಅನಿತ್ ಕುಮಾರ್, ಜಿ.ಎಲ್. ರಾಜೀವ್, ಚಿತ್ರಹಳ್ಳಿ ಜಿ.ಎಂ. ಲವಕುಮಾರ್ ಹಾಗೂ ಸ್ನೇಹ ಪಬ್ಲಿಕ್ ಸ್ಕೂಲ್‌ನ ಚೇರ್ಮನ್ ಮತ್ತು ಉದ್ಯಮಿ ಜೆ.ಎಸ್. ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.