ಶ್ರಮಜೀವಿಗಳು, ರೈತರ ಮಕ್ಕಳ ಶಿಕ್ಷಣಕ್ಕೆ ಜ್ಞಾನನಿಧಿ ಸೊಸೈಟಿ ಆದ್ಯತೆ : ಅಧ್ಯಕ್ಷ ನವೀನ್

ಸಮಗ್ರ ಸುದ್ದಿ ಚಿತ್ರದುರ್ಗ ಸೆ. 25

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಜ್ಞಾನನಿಧಿ ಕೋ-ಆಪರೇಟಿವ್ ಸೊಸೈಟಿಲಿ, ಸಂಸ್ಥೆಯು ಕೇವಲ ಶ್ರೀಮಂತರಿಗಷ್ಟೇ ಸೀಮಿತವಾಗಿರದೆ, ಶ್ರಮಜೀವಿಗಳು, ರೈತರು, ಹಿಂದುಳಿದ ವರ್ಗಗಳು ಹಾಗೂ ಶೈಕ್ಷಣಿಕವಾಗಿ ಮತ್ತು ಉದ್ಯೋಗಾವಕಾಶಗಳಿಂದ ವಂಚಿತರಾದ ಮಕ್ಕಳಿಗೆ ಬೆಂಬಲವಾಗಿ ನಿಲ್ಲುವ ಮುಖ್ಯ ಉದ್ದೇಶವನ್ನು ಹೊಂದಿದೆ ಎಂದು ವಿಧಾನ ಪರಿಷತ್ ಸದಸ್ಯರು, ಜ್ಞಾನನಿಧಿ ಕೋ-ಆಪರೇಟಿವ್ ಸೊಸೈಟಿಲಿ, ಅಧ್ಯಕ್ಷರಾದ ನವೀನ್ ಕೊಟ್ಟಿಗೆರೆ ಶಿವಪ್ರಕಾಶ್ ತಿಳಿಸಿದರು.

ಚಿತ್ರದುರ್ಗ ನಗರದ ಚಳ್ಳಕೆರೆ ರಸ್ತೆಯಲ್ಲಿನ ಎಸ್.ಎಸ್.ಕೆ.ಎಸ್.ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಜ್ಞಾನನಿಧಿ ಕೋ-ಆಪರೇಟಿವ್ ಸೊಸೈಟಿಲಿ,ನ ಸರ್ವ ಸದಸ್ಯರ ಪ್ರಥಮ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ಯನ್ನು ವಹಿಸಿ ಮಾತನಾಡಿದ ಅವರು ಸಮಾಜದ ಮಧ್ಯಮ, ಕೆಳ ಮಧ್ಯಮ ಹಾಗೂ ಬಡ ಕುಟುಂಬಗಳ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ ‘ಜ್ಞಾನನಿಧಿ’ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಅಗತ್ಯವಿರುವ ಧೈರ್ಯ, ಮಾನಸಿಕ ಸ್ಥೈರ್ಯ ಮತ್ತು ಶಿಕ್ಷಣ ಶಕ್ತಿಯನ್ನು ಒದಗಿಸುವ ಕೆಲಸವನ್ನು ಸಂಸ್ಥೆ ಮಾಡಲಿದೆ. ತಾವು ವೈಯಕ್ತಿಕವಾಗಿ ಉನ್ನತ ಮಟ್ಟವನ್ನು ತಲುಪಿದ್ದು, ತಮ್ಮ ಮಕ್ಕಳನ್ನು ವಿಶ್ವದ ಟಾಪ್ 10 ವಿಶ್ವವಿದ್ಯಾಲಯಗಳಲ್ಲಿ ಓದಿಸಿ ಉನ್ನತ ಹುದ್ದೆಗಳಲ್ಲಿ ನೆಲೆನಿಲ್ಲುವಂತೆ
ಮಾಡಿದ್ದಾರೆ. ಅದೇ ಮಾದರಿಯಲ್ಲಿ ಸಮಾಜದ ಸಾಮಾನ್ಯ ಹಾಗೂ ಬಡ ಕುಟುಂಬಗಳ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಅವರನ್ನು ಉನ್ನತ ಸ್ಥಾನಕ್ಕೆ ತಲುಪಿಸುವುದೇ ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಈ ಸಂಸ್ಥೆಯು ಲಾಭದಾಯಕ ಉದ್ದೇಶಕ್ಕಾಗಲಿ ಅಥವಾ ಶ್ರೀಮಂತರಿಗಾಗಲಿ ಮಾಡಿದ್ದಲ್ಲ. ಇದು ಸಂಪೂರ್ಣವಾಗಿ ಮಧ್ಯಮ, ಕೆಳ ಮಧ್ಯಮ ಮತ್ತು ಬಡ ವರ್ಗದ ಮಕ್ಕಳ ಭವಿಷ್ಯದ ಏಳಿಗೆಗಾಗಿ ರೂಪಿಸಲಾದ ಸೊಸೈಟಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಜ್ಞಾನನಿಧಿ ಸೊಸೈಟಿಯನ್ನು ಬೆಳೆಸಲು ಮತ್ತು ಸಮಾಜದ ಕಟ್ಟಕಡೆಯ ಮಗುವಿಗೂ ಉನ್ನತ ಶಿಕ್ಷಣದ ದಾರಿ ತೋರಿಸಲು ಎಲ್ಲರ ಸಹಕಾರ ಅಗತ್ಯವಿದ್ದು, ಸಂಸ್ಥೆಯು ಬದ್ಧತೆಯಿಂದ ಕಾರ್ಯನಿರ್ವಹಿಸಲಿದೆ ಸಂಘವು ಕೇವಲ ವಾಣಿಜ್ಯ ಉದ್ದೇಶಕ್ಕೆ ಸೀಮಿತವಾಗದೆ, ಹಿಂದುಳಿದ ಹಾಗೂ ಕಾಯಕ ಸಮುದಾಯದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ತಲುಪಿಸುವ ಸೇವಾ ಮನೋಭಾವದಿಂದ ಶ್ರಮಿಸಲಿದೆ ಸಂಘಟನೆಯ ವಿವಿಧ ಶೈಕ್ಷಣಿಕ, ತಾಂತ್ರಿಕ ಹಾಗೂ ಟ್ರಸ್ಟ್ ಸಂಬಂಧಿತ ಕಾರ್ಯಕ್ರಮಗಳನ್ನು ಮುನ್ನಡೆಸುವ ಕುರಿತು ಸದಸ್ಯರಿಗೆ ವಿವರಣೆ ನೀಡಿ ಅಧ್ಯಕ್ಷರಾಗಿ ತಮ್ಮ ಮೇಲೆ ಇಟ್ಟಿರುವ ಜವಾಬ್ದಾರಿಯನ್ನು ಅತ್ಯಂತ ಶಿಸ್ತು ಮತ್ತು ಯೋಜನೆಬದ್ಧವಾಗಿ, ಪ್ರಾಮಾಣಿಕತೆಯಿಂದ ನಿರ್ವಹಿಸುವುದಾಗಿ ಭರವಸೆ ನೀಡಿದರು. ಸಂಘದ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾದ ಕೇದಾರ್‍ನಾಥ್ ಅವರು ಚಿತ್ರದುರ್ಗದ ಕಾಯಕ ಸಮುದಾಯವಾದ ಸವಿತಾ ಸಮಾಜದ 40 ಮಂದಿ ಶ್ರಮಜವಿಗಳನ್ನು
ಸಂಘದ ಶೇರುದಾರರನ್ನಾಗಿ ಸೇರ್ಪಡೆಗೊಳಿಸಿದ್ದಾರೆ ಎಂದು ತಿಳಿಸಿದರು.

ಅಕ್ಟೋಬರ್ 31 ಅಥವಾ ನವೆಂಬರ್ 1 ರಂದು ಚಿತ್ರದುರ್ಗದ ಮುರುಘಾಮಠದ ಅನುಭವ ಮಂಟಪದಲ್ಲಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮದಲ್ಲಿ ಸಂಘದ ಅಧಿಕೃತ ಯೋಜನೆ ಗಳು, ತಂತ್ರಜ್ಞಾನ ಸಂಸ್ಥೆ ಹಾಗೂ ಟ್ರಸ್ಟ್‍ನ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು. ಜೊತೆಗೆ, ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ನೊಂದಣಿ ಪೋರ್ಟಲ್ ಅನ್ನು ಲೋಕಾರ್ಪಣೆಗೊಳಿಸಲಾಗುವುದು. ಈ ರಾಜ್ಯಮಟ್ಟದ ಉದ್ಘಾಟನಾ ಸಮಾರಂಭಕ್ಕೆ ಕೇಂದ್ರ ಶಿಕ್ಷಣ ಸಚಿವರಾದ ಪ್ರಹ್ಲಾದ್ ಜೋಶಿ, ರಾಜ್ಯ ಸಹಕಾರ ಸಚಿವ ಲಕ್ಷ್ಮಣ್ ಸವದಿ, ಉನ್ನತ ಶಿಕ್ಷಣ ಸಚಿವ ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯ ರೆಡ್ಡಿ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಆಹ್ವಾನಿಸಲು ತೀರ್ಮಾನಿಸ ಲಾಗಿದೆ. ಈ ಬೃಹತ್ ಸಮಾವೇಶದಲ್ಲಿ
ಸುಮಾರು 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ವ್ಯವಸ್ಥಾಪಕ ನಿರ್ದೆಶಕರಾದ ಇಲ್ಲಾಸ್ ಉಲ್ಲಾ ಷರೀಫ್ ಮಾತನಾಡಿ, ಸಹಕಾರ ಚಳುವಳಿಯು ಬಡವರ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ, ಅಲ್ಪಸಂಖ್ಯಾತರ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರ ಬದುಕನ್ನು ನೆಮ್ಮದಿಗೊಳಿಸುವ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿದೆಭಾರತದ ಸಹಕಾರ ಚಳುವಳಿಗೆ 120 ವರ್ಷಗಳ ಭವ್ಯ ಇತಿಹಾಸವಿದೆ. ಒಬ್ಬರಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬರು ಎಂಬ ಆದರ್ಶದೊಂದಿಗೆ ಸಮಾಜದ ಪ್ರಗತಿಗೆ ಕೈಜೋಡಿಸುವುದೇ ಸಹಕಾರ ತತ್ವದ ಮೂಲ ಉದ್ದೇಶವಾಗಿದೆ. ಸಂಘದ ಅಧ್ಯಕ್ಷರಾದ ಕೆ.ಎಸ್.ನವೀನ್ ಅವರ ನೇತೃತ್ವದಲ್ಲಿ ಸದಸ್ಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಸುಮಾರು 32 ಅತ್ಯುತ್ತಮ ಯೋಜನೆಗಳನ್ನು ರೂಪಿಸ ಲಾಗಿದೆ. ಇದರಲ್ಲಿ ಚಿನ್ನಾಭರಣ
ಸಾಲ, ವ್ಯಾಪಾರ ಸಾಲ, ಗೃಹ ನಿರ್ಮಾಣ ಸಾಲ, ಠೇವಣಿ ಸಂಗ್ರಹಣೆ ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ಸೌಲಭ್ಯಗಳು ಸೇರಿವೆ ಎಂದರು.

ಸಂಘವು ಸದಸ್ಯರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಬೆಂಬಲ ನೀಡುತ್ತಿದ್ದು, ಗ್ರಾಮೀಣ ಭಾಗದ ಮಕ್ಕಳಿಗೆ ಉನ್ನತ ವ್ಯಾಸಂಗ,
ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪರ ತರಬೇತಿಗಳನ್ನು ಒದಗಿಸುವ ವಿನೂತನ ಯೋಜನೆಗಳನ್ನು ಹಮ್ಮಿಕೊಂಡಿದೆ. ಹೊಸದಾಗಿ ಕೈಗಾರಿಕಾ ಸಂಸ್ಥೆಗಳನ್ನು ಸ್ಥಾಪಿಸುವವರಿಗೆ ಮತ್ತು ಸ್ವಂತ ಉದ್ಯಮ ಪ್ರಾರಂಭಿಸುವವರಿಗೆ ತಾಂತ್ರಿಕ ಸಲಹೆಗಳ ಜೊತೆಗೆ ಆರ್ಥಿಕ ನೆರವು ನೀಡುವ ಉದ್ದೇಶವನ್ನು ಸಂಘ ಹೊಂದಿದೆ. ಸದಸ್ಯರು ಕೇವಲ ಸಾಲ ಅಥವಾ ಠೇವಣಿಗೆ ಸೀಮಿತವಾಗದೆ, ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮತ್ತು ಅಮೂಲ್ಯ ಸಲಹೆಗಳನ್ನು ನೀಡುವುದು ಅತ್ಯಗತ್ಯ ಸಂಘವು ಕೇವಲ ಹಣಕಾಸು ಸಂಸ್ಥೆಯಾಗಿ ಉಳಿಯದೆ, ಸದಸ್ಯರ ಜೀವನಮಟ್ಟವನ್ನು ಎತ್ತರಿಸುವ ಶಕ್ತಿ ಕೇಂದ್ರವಾಗಿ ಬೆಳೆಯಬೇಕಿದೆ. ಆಡಳಿತ ಮಂಡಳಿ, ಪದಾಧಿಕಾರಿಗಳು ಹಾಗೂ ಸದಸ್ಯರ ಒಗ್ಗಟ್ಟಿನ ಸಹಕಾರದೊಂದಿಗೆ `ಜ್ಞಾನನಿಧಿ’ ಸಹಕಾರ ಸಂಘವು ರಾಜ್ಯದಲ್ಲೇ ಒಂದು
ಮಾದರಿ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದು ಆಶಿಸಿದರು.

Leave a Reply

Your email address will not be published. Required fields are marked *