ಡಾ. ಕೆ.ಎಂ. ವೀರೇಶ್ ನುಡಿನಮನ: ಸಾಹಿತ್ಯ, ಸಂಸ್ಕೃತಿ ಕ್ಷೇತ್ರಕ್ಕೆ ಅಪಾರ ಕೊಡುಗೆ ಸ್ಮರಣೆ.

ಸಮಗ್ರ ಸುದ್ದಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ Sep 25 : ಕನ್ನಡ ಸಂಸ್ಕೃತಿ, ಕನ್ನಡ ನುಡಿ ಹಾಗೂ ಕನ್ನಡ ನಾಡಿಗೆ ಕೆ.ಎಂ. ವೀರೇಶ್ ಅವರು ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರು ಬಿಟ್ಟುಹೋದ ಸುವಾಸನೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಸದಾ ಸ್ಮರಣೀಯ ಎಂದು ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಹೇಳಿದರು.

ನಗರದ ಐಶ್ವರ್ಯ ಪೋರ್ಟ್ ಸಭಾಂಗಣದಲ್ಲಿ ಶುಕ್ರವಾರ ಡಾ.ಕೆ.ಎಂ.ವೀರೇಶ್ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕೆ.ಎಂ.ವೀರೇಶ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯ ಎಲ್ಲ ಮಠಗಳೊಂದಿಗೆ ವೀರೇಶ್ ಅವರು ಉತ್ತಮ ಒಡನಾಟ ಹೊಂದಿದ್ದರು. ಎಲ್ಲರನ್ನೂ ಸಮಾನವಾಗಿ ಗೌರವಿಸುವ ಗುಣ ಅವರಲ್ಲಿತ್ತು. ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು ಎಂದು ಸ್ಮರಿಸಿದರು.

ಶ್ರಾವಣ ಮಾಸದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ತಾವಿಬ್ಬರೂ ಜೊತೆಯಾಗಿ ಭಾಗವಹಿಸಿದ್ದ ಸಂದರ್ಭವನ್ನು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಈ ವೇಳೆ ಮೆಲುಕು ಹಾಕಿದರು. ವೀರೇಶ್ ಅವರೊಂದಿಗೆ ಕಳೆದ ಆ ಕ್ಷಣಗಳು ಇದೀಗ ನೆನಪಾಗಿ ಕಾಡುತ್ತಿವೆ ಎಂದು ಹೇಳಿದರು.

ವೀರೇಶ್ ಅವರ ಅಕಾಲಿಕ ನಿಧನವು ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ಸಮುದಾಯಕ್ಕೆ ಹಾಗೂ ಅವರೊಂದಿಗೆ ಒಡನಾಟ ಹೊಂದಿದ್ದ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ತುಂಬಲಾರದ ನಷ್ಟವಾಗಿದೆ. ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡ ನೋವು ಎಲ್ಲರನ್ನೂ ಕಾಡುತ್ತಿದೆ ಎಂದರು.

‘ಶರಣರ ಸಾವು ಮರಣದಲ್ಲಿ ನೋಡು’ ಎಂಬ ಮಾತಿನಂತೆ, ವೀರೇಶ್ ಅವರ ಬದುಕು ಮತ್ತು ಸೇವೆಯನ್ನು ಸ್ಮರಿಸಬೇಕು. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಸವಾದಿ ಪ್ರಮುಖರು ಹಾಗೂ ಜಗತ್ತಿನ ತಾತ್ವಿಕ ಶಕ್ತಿಗಳು ಅವರ ಕುಟುಂಬ, ಬಂಧುಗಳು, ಅಭಿಮಾನಿಗಳು ಹಾಗೂ ಎಲ್ಲರಿಗೂ ಕರುಣಿಸಲಿ ಎಂದು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಆಶಿಸಿದರು.

ಛಲವಾದಿ ಗುರುಪೀಠದ ಬಸವನಾಗೀದೇವ ಸ್ವಾಮೀಜಿ ಮಾತನಾಡಿ, ಹಿರಿಯ ಶಿಕ್ಷಣ ತಜ್ಞ, ಸಾಹಿತ್ಯ–ಸಾಂಸ್ಕೃತಿಕ ಕ್ಷೇತ್ರದ ಸಂಘಟಕ ಹಾಗೂ ಬಾಪೂಜಿ ಶಿಕ್ಷಣ ಸಂಸ್ಥೆಗಳ ರೂವಾರಿ ಡಾ.ಕೆ.ಎಂ.ವೀರೇಶ್‌ ಅವರ ಅಗಲಿಕೆ ಜಿಲ್ಲೆಯ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಹೇಳಿದರು.

ವೀರೇಶ್‌ ಅವರು ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ. ಶಿಕ್ಷಣ, ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಬೆಸೆಯುವ ಸೇತುವೆಯಂತಿದ್ದರು. ಅವರ ಸರಳತೆ, ಸ್ನೇಹಪರತೆ ಹಾಗೂ ಎಲ್ಲರನ್ನೂ ಗೌರವದಿಂದ ಕಾಣುವ ಗುಣ ಅವರನ್ನು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಸಿದೆ ಎಂದರು.

ವೀರೇಶ್‌ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದವರನ್ನೂ ಅವರು ಎಂದಿಗೂ ದ್ವೇಷದಿಂದ ನೋಡುತ್ತಿರಲಿಲ್ಲ. ವಿಚಾರದಲ್ಲಿ ಭಿನ್ನತೆ ಇದ್ದರೂ ವ್ಯಕ್ತಿಯೊಂದಿಗೆ ಆತ್ಮೀಯವಾಗಿ ಬೆರೆಯುವ ದೊಡ್ಡ ಗುಣ ಅವರಲ್ಲಿತ್ತು. ನಗುಮುಖದಿಂದ ಎಲ್ಲರನ್ನೂ ಮಾತನಾಡಿಸಿ, ಹೊಸಬರನ್ನು ಪ್ರೋತ್ಸಾಹಿಸುತ್ತಿದ್ದ ಅವರ ನಡೆ ಅನುಕರಣೀಯ ಎಂದು ಹೇಳಿದರು.

ಮನುಷ್ಯ ದೈಹಿಕವಾಗಿ ನಮ್ಮಿಂದ ದೂರವಾದರೂ ಅವರು ಮಾಡಿದ ಕೆಲಸ, ಬೆಳೆಸಿದ ಸಂಬಂಧಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳ ಮೂಲಕ ಜೀವಂತವಾಗಿರುತ್ತಾರೆ. ವೀರೇಶ್‌ ಅವರ ವಿಚಾರಗಳು, ಶೈಕ್ಷಣಿಕ ಸೇವೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದರು.

ವೀರೇಶ್‌ ಅವರು ಹಲವಾರು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ, ಯುವಜನರಲ್ಲಿ ಸಾಹಿತ್ಯ, ಕಲೆ ಮತ್ತು ಶಿಕ್ಷಣದ ಆಸಕ್ತಿ ಬೆಳೆಸಲು ಶ್ರಮಿಸಿದ್ದರು. ಅವರ ಅಗಲಿಕೆಯಿಂದ ಉಂಟಾಗಿರುವ ಶೂನ್ಯವನ್ನು ತುಂಬುವುದು ಕಷ್ಟ. ಆದರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.
ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ ಮಾತನಾಡಿ, ಡಾ. ಕೆ.ಎಂ.ವೀರೇಶ್ ಅವರು ಇಹಲೋಕ ತ್ಯಜಿಸಿದ್ದಾರೆ ಎಂಬುದನ್ನು ಈ ಕ್ಷಣಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಲ್ಲರಿಗೂ ನೆರಳಾಗಿ ನಿಂತಿದ್ದ ದೊಡ್ಡ ಆಲದ ಮರವೊಂದು ಏಕಾಏಕಿ ಉರುಳಿ ಬಿದ್ದಂತೆ ಭಾಸವಾಗುತ್ತಿದೆ ಎಂದು ಸಂತಾಪ ವ್ಯಕ್ತಪಡಿಸಿದರು.

ಸಾಹಿತ್ಯ, ಸಂಗೀತ, ರಂಗಭೂಮಿ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರದ ಹಲವು ಆಯಾಮಗಳಲ್ಲಿ ವೀರೇಶ್ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದರು. ಕೇವಲ ಕಾರ್ಯಕ್ರಮಗಳ ಆಯೋಜನೆ ಅಥವಾ ಸಂಘಟನೆಗೆ ಸೀಮಿತರಾಗದೆ, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ, ಕಲಾವಿದರ ಕಷ್ಟಗಳಿಗೆ ಸ್ಪಂದಿಸುವ ಹೃದಯವಂತಿಕೆ ಅವರಲ್ಲಿತ್ತು ಎಂದು ಹೇಳಿದರು.

ವೀರೇಶ್ ಅವರಿಗೆ ವೈಯಕ್ತಿಕ ಶತ್ರುಗಳಿರಲಿಲ್ಲ. ಅವರ ವಿಚಾರಗಳನ್ನು ವಿರೋಧಿಸಿದವರೂ, ಯಾವುದೋ ಕಾರಣಕ್ಕೆ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದವರೂ ಇದ್ದರು. ಆದರೆ ಅಂತಹವರನ್ನೂ ಅವರು ಮನಸ್ಸಿನಲ್ಲಿ ಇಟ್ಟುಕೊಳ್ಳದೆ, ಎದುರಾದಾಗ ನಗುಮುಖದಿಂದಲೇ ಮಾತನಾಡಿಸುತ್ತಿದ್ದರು. ಇದೇ ಅವರ ವ್ಯಕ್ತಿತ್ವದ ದೊಡ್ಡ ಗುಣ. ಎಲ್ಲರನ್ನೂ ತಮ್ಮವರಂತೆ ಕಾಣುತ್ತಿದ್ದ ಅವರು ನಿಜವಾದ ಅಜಾತಶತ್ರುವಾಗಿದ್ದರು ಎಂದರು.

ಹಿರಿಯ ರಂಗಭೂಮಿ ನಿರ್ದೇಶಕ ಅಶೋಕ್ ಬಾದರದಿನ್ನಿ ಅವರ ಕೊನೆಯ ದಿನಗಳಲ್ಲಿ ವೀರೇಶ್ ಅವರು ಕೈಹಿಡಿದು ನಡೆಸಿದ ಘಟನೆ ಅವರ ನಿಸ್ವಾರ್ಥ ಸೇವಾ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ. ಸಹಾಯ ಮಾಡುವಾಗ ಪ್ರತಿಫಲವನ್ನು ನಿರೀಕ್ಷಿಸದ ಅವರ ಮಾನವೀಯ ಗುಣಕ್ಕೆ ಇದು ಒಂದು ಉದಾಹರಣೆ ಎಂದು ಹೇಳಿದರು.

ವೀರೇಶ್ ಅವರ ಅಗಲಿಕೆ ಒಬ್ಬ ವ್ಯಕ್ತಿಯ ನಷ್ಟ ಮಾತ್ರವಲ್ಲ. ಸಾಹಿತ್ಯ, ಸಂಗೀತ, ರಂಗಭೂಮಿ ಸೇರಿದಂತೆ ಚಿತ್ರದುರ್ಗದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ. ಅವರು ಬೆಳೆಸಿದ ಸಂಬಂಧಗಳು, ನೀಡಿದ ಪ್ರೋತ್ಸಾಹ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಳು ಮುಂದೆಯೂ ಅವರನ್ನು ನೆನಪಿಸುವಂತೆ ಮಾಡಲಿವೆ. ಅವರು ಸದಾ ಸ್ಮರಣೀಯರು ಎಂದು ತಿಳಿಸಿದರು.

ಸಾಹಿತಿ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ವರ್ಷದ ಹಿಂದೆ ಇದೇ ವೇದಿಕೆಯಲ್ಲಿ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದ ಹಿನ್ನೆಲೆಯಲ್ಲಿ ಡಾ. ಕೆ.ಎಂ. ವೀರೇಶ್ ಅವರಿಗೆ ಹೂಮಳೆ ಸುರಿಸಿ ಗೌರವಿಸಲಾಗಿತ್ತು. ಆದರೆ ಇಂದು ಇದೇ ವೇದಿಕೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಸನ್ನಿವೇಶ ಎದುರಾಗಿರುವುದು ನೋವಿನ ಸಂಗತಿ ಎಂದು ಹೇಳಿದರು.

ನೆನಪುಗಳು ಎಂದಿಗೂ ಸಾಯಬಾರದು. ಮನುಷ್ಯ ದೈಹಿಕವಾಗಿ ದೂರವಾದರೂ ಮಾನಸಿಕವಾಗಿ ನಮ್ಮೊಂದಿಗೆ ಇರಬೇಕು. ಆ ಸಾಲಿಗೆ ವೀರೇಶ್ ಅವರು ನಿಲ್ಲುತ್ತಾರೆ ಎಂದರು.

ಯಾರನ್ನಾದರೂ ಕಳೆದುಕೊಂಡಾಗ ಆಗುವ ಸಂಕಟವನ್ನು ಅನುಭವಿಸಿದವರಿಗೆ ಮಾತ್ರ ಅರ್ಥವಾಗುತ್ತದೆ. ಇಂತಹ ಸಂದರ್ಭದಲ್ಲಿ ಮಾನವೀಯತೆ ಅತ್ಯಂತ ಮುಖ್ಯ. ಮನುಷ್ಯ ಪ್ರೀತಿಯ ಸಂಕೇತವೇ ಮನಸ್ಸು ಕಟ್ಟುವ ಪ್ರಕ್ರಿಯೆ. ವೀರೇಶ್ ಅವರ ಕುರಿತ ನುಡಿನಮನ ಕಾರ್ಯಕ್ರಮವು ಸಾಂಸ್ಕೃತಿಕ ಚರಿತ್ರೆಯಲ್ಲಿ ಹೆಜ್ಜೆ ಗುರುತಾಗಿ ಉಳಿಯಲಿದೆ ಎಂದು ಹೇಳಿದರು.

ವೀರೇಶ್ ಅವರ ಮಾತು, ನಡೆ ಹಾಗೂ ನುಡಿಯಲ್ಲಿ ಸದಾ ನಗು ಇರುತ್ತಿತ್ತು. ಅದು ಕೃತಕವಾಗಿರದೆ, ಅವರ ವ್ಯಕ್ತಿತ್ವದ ಸಹಜ ಅಭಿವ್ಯಕ್ತಿಯಾಗಿತ್ತು. ವಚನ ಸಾಹಿತ್ಯ ಅವರ ಬದುಕನ್ನು ಮತ್ತಷ್ಟು ಹಸನುಗೊಳಿಸಿತ್ತು. ಅವರ ಬದುಕಿನ ಮೌಲ್ಯಗಳು ಹಾಗೂ ಮಾನವೀಯ ಕಾಳಜಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಅಗತ್ಯವಿದೆ ಎಂದರು.

ಮನುಷ್ಯ ಪ್ರೀತಿ ಶಾಶ್ವತವಾಗಿರಲಿ. ವೀರೇಶ್ ಅವರ ನೆನಪುಗಳು ನಮ್ಮ ನಡುವೆ ಸದಾ ಜೀವಂತವಾಗಿರಲಿ ಎಂದು ಆಶಿಸಿದರು.

ಕಸಾಪ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಮಾತನಾಡಿ, ಚಿತ್ರದುರ್ಗದ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ವಲಯಕ್ಕೆ ಕೆ.ಎಂ. ವೀರೇಶ್ ಮತ್ತು ಡಿ. ಬೋರಪ್ಪ ಅವರು ನೀಡಿದ ಕೊಡುಗೆಗಳ ನಿಜವಾದ ಮೌಲ್ಯವನ್ನು ಎತ್ತಿಹಿಡಿಯಬೇಕು. ಅವರು ತೋರಿಸಿಕೊಟ್ಟ ನಿರಂತರತೆ, ಸಾಂಸ್ಕೃತಿಕ ಕಾಳಜಿ ಹಾಗೂ ಸಹಾಯ ಹಸ್ತದ ಗುಣಗಳನ್ನು ಮೈಗೂಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ ಎಂದರು.

ಪ್ರೊ. ನಟರಾಜ್ ಮಾತನಾಡಿ, ವ್ಯಕ್ತಿಯೊಬ್ಬ ತೀವ್ರ ಸಂಕಷ್ಟದಲ್ಲಿದ್ದಾಗ ಅಥವಾ ಕಷ್ಟದ ಕಾಲದಲ್ಲಿ ಅವರ ಮನೆಗೆ ತೆರಳಿ ಧೈರ್ಯ ತುಂಬಿ, ಸಾಂತ್ವನ ಹೇಳುವ ದೊಡ್ಡ ಗುಣ ಕೆ.ಎಂ. ವೀರೇಶ್ ಅವರಲ್ಲಿತ್ತು. ಜಾತಿ, ಮತ, ಧರ್ಮದ ಭೇದವಿಲ್ಲದೆ ಕಷ್ಟದಲ್ಲಿರುವವರನ್ನು ಗುರುತಿಸಿ, ಅವರ ನಿರೀಕ್ಷೆಗೂ ಮೀರಿ ಸ್ಪಂದಿಸುತ್ತಿದ್ದರು. ಇಂತಹ ಗುಣ ಎಲ್ಲರಲ್ಲೂ ಕಾಣಸಿಗುವುದಿಲ್ಲ ಎಂದರು.

ಸಾಹಿತಿ ಆನಂದ್ ಕುಮಾರ್ ಮಾತನಾಡಿ, ಕೆ.ಎಂ. ವೀರೇಶ್ ಅಪೂರ್ವ ಚೇತನದ ವ್ಯಕ್ತಿಯಾಗಿದ್ದರು. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ತಮ್ಮ ಸಾಮಾಜಿಕ ಕಳಕಳಿ ಹಾಗೂ ಜನಪರ ಕೆಲಸಗಳ ಮೂಲಕ ಸದಾ ಜೀವಂತವಾಗಿರುತ್ತಾರೆ ಎಂದು ಸ್ಮರಿಸಿದರು.

ಮುಖಂಡ ಜಿತೇಂದ್ರ ಮಾತನಾಡಿ, ವಿದ್ಯಾಸಂಸ್ಥೆಯಲ್ಲಿ ಕಡಿಮೆ ಶುಲ್ಕ ಪಡೆದು ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುತ್ತಿದ್ದರು. ವಿದ್ಯಾರ್ಥಿಗಳ ಕುಟುಂಬದ ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಂಡು ನೆರವಾಗುತ್ತಿದ್ದರು. ಅವರು ಕಟ್ಟಿದ ವಿದ್ಯಾಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು. ಅವರ ಮಹತ್ವದ ಪ್ರಯತ್ನಗಳು ಹಾಗೂ ಆಶಯಗಳು ಸದಾ ಈಡೇರಬೇಕು ಎಂದು ಹಾರೈಸಿದರು.

ಮಾಜಿ ನಗರಸಭಾ ಅಧ್ಯಕ್ಷ ನಿರಂಜನ್ ಮೂರ್ತಿ ಮಾತನಾಡಿ, ಯಾವುದೇ ಕಾರ್ಯಕ್ರಮವಿರಲಿ, 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾಗಲಿ ಅಥವಾ ಮುರುಘರಾಜೇಂದ್ರ ಮಠದ ಕಾರ್ಯಕ್ರಮಗಳಾಗಲಿ, ವೀರೇಶ್ ಅವರು ಆತ್ಮೀಯವಾಗಿ ತಮ್ಮೊಂದಿಗೆ ಜೊತೆಯಾಗಿರುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ನುಡಿನಮನ ಸಲ್ಲಿಸಿದರು.

ದಲಿತ ಮುಖಂಡ ರಾಜಣ್ಣ ಮಾತನಾಡಿ, ಡಾ. ಕೆ.ಎಂ. ವೀರೇಶ್ ಅವರು ದಲಿತ ಮಕ್ಕಳ ಶಿಕ್ಷಣಕ್ಕೆ ನೀಡಿದ ಬೆಂಬಲವನ್ನು ಸ್ಮರಿಸಿದರು. ತಾವು ಕೂಡ ನಾಲ್ಕೈದು ಮಕ್ಕಳನ್ನು ಶಾಲೆಗೆ ಸೇರಿಸಿ, ವಿದ್ಯಾರ್ಥಿವೇತನ ಕೊಡಿಸುವ ಮೂಲಕ ಶಿಕ್ಷಣಕ್ಕೆ ನೆರವಾಗಿದ್ದಾಗಿ ತಿಳಿಸಿದರು. ವೀರೇಶ್ ಅವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡಿದ ಸಹಾಯವನ್ನು ಎಂದಿಗೂ ಮರೆಯಲಾಗದು ಎಂದರು.

ನಿವೃತ್ತ ಸಬ್‌ಇನ್‌ಸ್ಪೆಕ್ಟರ್ ನಾಗರಾಜ್ ಮಾತನಾಡಿ, ಕೆ.ಎಂ. ವೀರೇಶ್ ಅವರಿಗೆ ವಿಧಾನ ಪರಿಷತ್ ಸದಸ್ಯತ್ವದಂತಹ ಉನ್ನತ ರಾಜಕೀಯ ಅವಕಾಶಗಳು ಹುಡುಕಿಕೊಂಡು ಬಂದಾಗಲೂ ವೈಯಕ್ತಿಕ ಲಾಭ ಅಥವಾ ಅಧಿಕಾರಕ್ಕೆ ಆಸೆಪಡದೆ ಅವುಗಳನ್ನು ಸೌಜನ್ಯದಿಂದ ತಿರಸ್ಕರಿಸಿದ್ದರು. ಇದು ಅವರ ಜನಪರ ಕಾಳಜಿ ಹಾಗೂ ಪ್ರಾಮಾಣಿಕತೆಗೆ ನಿದರ್ಶನವಾಗಿದೆ. ಇಂತಹ ಆದರ್ಶಪ್ರಾಯ ವ್ಯಕ್ತಿಯನ್ನು ಕಳೆದುಕೊಂಡಿರುವುದು ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.

ಸಾಹಿತಿ ಸಂಗೇನಹಳ್ಳಿ ಅಶೋಕ್‌ಕುಮಾರ್ ಮಾತನಾಡಿ, ಯಾವುದೇ ಸಂದರ್ಭದಲ್ಲೂ ಎದುರಾದಾಗ ವಿನಯದಿಂದ ಮಾತನಾಡಿಸುತ್ತಿದ್ದ ಕೆ.ಎಂ.ವೀರೇಶ್ ಅವರು ಬದುಕಿದ್ದಾಗ ಮಾತ್ರವಲ್ಲ, ಅಗಲಿದ ಬಳಿಕವೂ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.

ಕೆಲವರು ಬದುಕಿದ್ದಾಗಲೇ ಸತ್ತಂತಿರುತ್ತಾರೆ. ಆದರೆ ಕೆಲವರು ನಮ್ಮನ್ನು ಅಗಲಿದರೂ ಜನರ ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತಾರೆ. ಅಂತಹವರ ಸಾಲಿಗೆ ವೀರೇಶ್ ಸೇರುತ್ತಾರೆ. ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು ಎಂಬ ಮಹದಾಸೆ ಅವರಲ್ಲಿತ್ತು ಎಂದು ಸ್ಮರಿಸಿದರು.
ಸಾಮಾಜಿಕ ಚಿಂತಕ ಆರ್. ಶೇಷಣ್ಣಕುಮಾರ್ ಮಾತನಾಡಿ, ಹಣಕ್ಕೆ ಹೆಚ್ಚಿನ ಮನ್ನಣೆ ನೀಡುವವರೇ ಹೆಚ್ಚಿರುವ ಇಂದಿನ ಕಾಲಘಟ್ಟದಲ್ಲಿ ವೀರೇಶ್ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವ ಮೂಲಕ ನೂರಾರು ಸಂಘಟನೆಗಳಿಗೆ ಬೆನ್ನೆಲುಬಾಗಿದ್ದರು. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ತಾವು ಆಸ್ಪತ್ರೆಗೆ ದಾಖಲಾಗಿದ್ದಾಗ, ತಮ್ಮ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಬಳಿಕ ದೂರವಾಣಿ ಮೂಲಕ ‘ನಿಮ್ಮ ಶ್ರೀಮತಿ ಆರೋಗ್ಯವಾಗಿದ್ದಾರೆ, ನೀವು ಚಿಂತೆ ಮಾಡಬೇಡಿ’ ಎಂದು ಧೈರ್ಯ ತುಂಬಿದ್ದರು. ಅವರಲ್ಲಿದ್ದ ಹೃದಯವಂತಿಕೆಗೆ ಇದೊಂದು ನಿದರ್ಶನ ಎಂದು ಹೇಳಿದರು.

ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಸರಳ-ಸಜ್ಜನಿಕೆಯ ಗುಣ ಹೊಂದಿದ್ದ ವೀರೇಶ್ ಅವರು ಸಾಂಸ್ಕೃತಿಕ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆ ಸ್ಮರಣೀಯ. ಎಲ್ಲರನ್ನೂ ಆತ್ಮೀಯತೆಯಿಂದ ಕಾಣುತ್ತಿದ್ದ ಅವರು, ತಮ್ಮ ಒಡನಾಡಿಗಳೊಂದಿಗೆ ಹೊಂದಿದ್ದ ಬಾಂಧವ್ಯದಲ್ಲೇ ಅವರ ಹೃದಯವಂತಿಕೆ ವ್ಯಕ್ತವಾಗುತ್ತಿತ್ತು ಎಂದು ಹೇಳಿದರು.

ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಕಾರ್ಯದರ್ಶಿ ಎಚ್.ಎಸ್.ಟಿ. ಸ್ವಾಮಿ ಮಾತನಾಡಿ, ಕೆ.ಎಂ.ವೀರೇಶ್ ಪ್ರತಿಷ್ಠಾನದಿಂದ ಮುಂದಿನ ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಚಿತ್ರದುರ್ಗ ಸೈನ್ಸ್ ಫೌಂಡೇಷನ್ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕೆ.ಸಿ.ಉಮಾಮಹೇಶ್ವರ, ಬಸವರಾಜ ಮುದನೂರು, ಕಿರಣ್‌ಕುಮಾರ್, ದ್ವಾದಕನಾಥ್, ಚಂದ್ರು, ಚಳ್ಳಕೆರೆ ವೀರೇಶ್, ಕ್ರಿಯೇಟಿವ್ ವೀರೇಶ್, ಹಾಸ್ಯ ಸಾಹಿತಿ ಜಗನ್ನಾಥ್, ಶಾರದಾ ಬ್ಯಾಂಡ್‌ಸೆಟ್ ಗುರುಮೂರ್ತಿ, ಚಳ್ಳಕೆರೆ ಬಸವರಾಜ್, ಪ್ರಕಾಶ್ ಬಾದರದಿನ್ನಿ, ಪರಮೇಶ್ವರಪ್ಪ ಕುದುರಿ, ಹುರುಳಿ ಬಸವರಾಜ್, ಮಾಲತೇಶ್ ಅರಸ್, ಕೆ.ಎಂ.ವೀರೇಶ್ ಪ್ರತಿಷ್ಠಾನದ ಸಂಚಾಲಕ ಗೌನಹಳ್ಳಿ ಗೋವಿಂದಪ್ಪ, ಟಿ.ಎನ್.ಪ್ರಹ್ಲಾದ್, ಕೆಪಿಎಂ ಗಣೇಶಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಡಾ.ನವೀನ್ ಮಸ್ಕಲ್ ನಿರೂಪಿಸಿದರು.

Leave a Reply

Your email address will not be published. Required fields are marked *