WPL 2023: ಹ್ಯಾಟ್ರಿಕ್ ಸೋಲಿನ ಹತಾಶೆಯಲ್ಲಿ ಆರ್​ಸಿಬಿ ನಾಯಕಿ ಸ್ಮೃತಿ ನೇರವಾಗಿ ದೂರಿದ್ದು ಯಾರನ್ನು ಗೊತ್ತಾ?

WPL 2023 Gave away 10 to15 runs more than what we expected in GG loss says RCB captain Smriti Mandhan

ಲೀಗ್ ಆರಂಭಕ್ಕೂ ಮುನ್ನ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ನ ( Women’s Premier League) ಚಾಂಪಿಯನ್ ಯಾರಾಗುತ್ತಾರೆ​ ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ಎಲ್ಲರ ಉತ್ತರ ಆರ್​ಸಿಬಿ (RCB) ಆಗಿತ್ತು. ಆದರೆ ಟೂರ್ನಿ ಆರಂಭವಾದ ಬಳಿಕ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್​ಸಿಬಿ ಇದೀಗ ಟೂರ್ನಿಯಿಂದಲೇ ಹೊರಬೀಳುವ ಹೊಸ್ತಿಲಿನಲ್ಲಿದೆ. ಪುರುಷರ ತಂಡದಂತೆಯೇ ತಂಡದಲ್ಲಿ ಖ್ಯಾತರನ್ನು ಹೊಂದಿರುವ ಆರ್​ಸಿಬಿ ಮಹಿಳಾ ತಂಡಕ್ಕೆ ಬೌಲಿಂಗ್​ನದ್ದೆ ಸಮಸ್ಯೆಯಾಗಿದೆ. ಆರ್​ಸಿಬಿ ಮಹಿಳಾ ತಂಡದ ಬೌಲಿಂಗ್ ಲೈನ್ ಅಪ್ ಮೊದಲ ಎರಡು ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್​ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಆದರೆ ಮೂರನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (Gujarat Giants) ವಿರುದ್ಧ 7 ವಿಕೆಟ್ ಪಡೆದರೂ ಯಾವುದೇ ಲಾಭವಾಗಲಿಲ್ಲ. 7 ವಿಕೆಟ್ ಕಳೆದುಕೊಂಡಿದ್ದರ ಹೊರತಾಗಿಯೂ ಗುಜರಾತ್ ತಂಡ 20 ಓವರ್‌ಗಳಲ್ಲಿ 201 ರನ್ ಗಳಿಸಿತು. ಹ್ಯಾಟ್ರಿಕ್ ಸೋಲಿನ ಬಳಿಕ ಮಾತನಾಡಿದ ಸ್ಮೃತಿ ಮಂಧಾನ (Smriti Mandhana) ಕೂಡ ತಮ್ಮ ಬೌಲಿಂಗ್ ವಿಭಾಗದಲ್ಲಿರುವ ನ್ಯೂನತೆಯ ಬಗ್ಗೆ ಹತಾಶರಾಗಿ ಮಾತನಾಡಿದ್ದಾರೆ.

200+ ರನ್ ಚೇಸ್ ಮಾಡಿ ಗೆಲ್ಲುವುದು ಸುಲಭವಲ್ಲ

ವಾಸ್ತವವಾಗಿ ನಿನ್ನೆ ನಡೆದ ಮ್ಯಾಚ್​ನಲ್ಲಿ ಪಿಚ್ ಬ್ಯಾಟಿಂಗ್ ಸಹಕಾರಿಯಾಗಿದ್ದರೂ 200+ ರನ್ ಚೇಸ್ ಮಾಡಿ ಗೆಲ್ಲುವುದು ಸುಲಭವಲ್ಲ. ಆದರೂ ಕೊನೆಯವರೆಗೂ ಹೋರಾಟ ನಡೆಸಿದ ಆರ್​ಸಿಬಿಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಇದಕ್ಕೆ ಪ್ರಮುಖ ಕಾರಣ ಬ್ಯಾಟಿಂಗ್​ ವಿಭಾಗದಲ್ಲಿ ಜೊತೆಯಾಟ ಬರಲಿಲ್ಲ. ವಿಶೇಷವಾಗಿ ಸೋಫಿ ಡಿವೈನ್ ಹಾಗೂ ಆಲಿಸ್ ಪೆರ್ರಿ ಅವರಿಗೆ ಯಾರು ಸಾಥ್​ ನೀಡಲಿಲ್ಲ. ಕೊನೆಯಲ್ಲಿ ಹೀದರ್ ನೈಟ್ ಅಬ್ಬರಿಸಿದರಾದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಇನ್ನ ಸಿಕ್ಕ ಅವಕಾಶವನ್ನು ಬಳಸಿಕೊಂಡ ಶ್ರೇಯಾಂಕಾ ಪಾಟೀಲ್ ಕೆಳಕ್ರಮಾಂಕದಲ್ಲಿ ಕೊಂಚ ಹೋರಾಟ ನೀಡಿದರಾದರೂ ಬೃಹತ್ ಟಾರ್ಗೆಟ್ ಅನ್ನು ಬೆನ್ನಟ್ಟಲಾಗಲಿಲ್ಲ.

WPL 2023: 18 ಎಸೆತಗಳಲ್ಲಿ ಅರ್ಧಶತಕ! ಆರ್​ಸಿಬಿ ಹೈರಾಣ; ಹರ್ಮನ್‌ಪ್ರೀತ್ ದಾಖಲೆ ಉಡೀಸ್

ಬೌಲಿಂಗ್ ವಿಷಯದಲ್ಲಿ ಸ್ವಲ್ಪ ಸಮಸ್ಯೆ ಇದೆ

ಅಂತಿಮವಾಗಿ 190 ರನ್​ಗಳಿಗೆ ಸುಸ್ತಾದ ಆರ್​ಸಿಬಿ 11 ರನ್​ಗಳಿಂದ ಸೋಲೊಪ್ಪಿಕೊಂಡಿತು. ಸೋಲಿನ ಬಳಿಕ ಮಾತನಾಡಿದ ನಾಯಕಿ ಸ್ಮೃತಿ ಮಂಧಾನ, ‘ಬೌಲಿಂಗ್ ವಿಭಾಗದಲ್ಲಿ ಸ್ವಲ್ಪ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ. ಈ ಪಂದ್ಯದಲ್ಲಿ ನಾವು ನಿರೀಕ್ಷೆಗಿಂತ ಕನಿಷ್ಠ 10-15 ರನ್ ಹೆಚ್ಚು ನೀಡಿದ್ದೇವೆ. 2-3 ಓವರ್‌ಗಳಲ್ಲಿ ನಾವು ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟೇವು. ಒಂದು ವೇಳೆ ಈ ಎರಡು ಮೂರು ಓವರ್​ಗಳಲ್ಲಿ ರನ್ ಕಡಿಮೆ ನೀಡಿದ್ದರೆ ಬಹುಶಃ ಫಲಿತಾಂಶವು ವಿಭಿನ್ನವಾಗಿರಬಹುದಾಗಿತ್ತು ಎಂದಿದ್ದಾರೆ. ಅಲ್ಲದೆ ಕೆಳಕ್ರಮಾಂಕದಲ್ಲಿ ತಂಡಕ್ಕೆ ನೆರವಾದ ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್ ಆಟದ ಬಗ್ಗೆಯೂ ಮಾತನಾಡಿದ ಸ್ಮೃತಿ, ಈ ಇಬ್ಬರ ಕೊಡುಗೆ ಸಕಾರಾತ್ಮಕವಾಗಿದೆ. ಎರಡೂ ವಿಭಾಗಗಳಲ್ಲಿ ಶ್ರೇಯಾಂಕಾ ಅವರ ಪ್ರದರ್ಶನ ಗಮನ ಸೆಳೆದಿದೆ ಎಂದರು.’

ಸಾನಿಯಾ ಮುಖದಲ್ಲಿಯೂ ನಿರಾಸೆ

ವಾಸ್ತವವಾಗಿ ಆರ್​ಸಿಬಿ ಫ್ರಾಂಚೈಸ್, ಆಟಗಾರ್ತಿಯರ ಮನೋಬಲ ಹೆಚ್ಚಿಸುವ ಸಲುವಾಗಿ ಟೆನಿಸ್ ಸ್ಟಾರ್ ಸಾನಿಯಾ ಮಿರ್ಜಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ಆಗಿ ನೇಮಿಸಿದೆ. ಆದರೆ ಹ್ಯಾಟ್ರಿಕ್ ಸೋಲಿನ ನಂತರ ಮೆಂಟರ್ ಸಾನಿಯಾ ಮುಖದಲ್ಲಿಯೂ ನಿರಾಸೆ ಎದ್ದು ಕಾಣುತ್ತಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/wpl-2023-gave-away-10-to15-runs-more-than-what-we-expected-in-gg-loss-says-rcb-captain-smriti-mandhana-psr-au14-533321.html

Leave a Reply

Your email address will not be published. Required fields are marked *