ಚಿತ್ರದುರ್ಗ ಜೂ. 26
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗೃಹಲಕ್ಷ್ಮಿಯರ ಹೆಸರಿನಲ್ಲಿ ಸರ್ಕಾರದ ಬೊಕ್ಕಸ ಬರಿದಾಗುತ್ತಿದ್ದು, ಕಾಂಗ್ರೆಸಿಗರ ಖಜಾನೆ ತುಂಬುತ್ತಿರುವುದೇ ಈ ಸರ್ಕಾರದ ಸಾಧನೆ ಎಂದು ಅವರು ಲೇವಡಿ ಮಾಡಿದ್ದಾರೆ. ಸುಮಾರು 19,020 ಗೃಹಲಕ್ಷ್ಮಿ ಫಲಾನುಭವಿಗಳ ಮಾಸಿಕ ಹಣವು ಕೇವಲ ಒಂದೇ ಒಂದು ಬ್ಯಾಂಕ್ ಖಾತೆಗೆ ಜಮಾವಾಗುತ್ತಿದೆ. ಇದು ವ್ಯವಸ್ಥಿತವಾಗಿ ನಡೆದಿರುವ ದೊಡ್ಡ ಮಟ್ಟದ ಹಗರಣ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಅವರು ಆರೋಪಿಸಿ ಯಾವುದೇ-ಬ್ಯಾಂಕ್ ಖಾತೆಯ ಸರಿಯಾದ ವಿವರಗಳೇ ಇಲ್ಲದ 23,262 ಖಾತೆಗಳಿಗೆ ಬರೋಬ್ಬರಿ 46.52 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ. ಈ ಹಣ ಯಾರ ಪಾಲಾಗಿದೆ ? ಈ ಖಾತೆಗಳ ಅಸಲಿ ಮಾಲೀಕರು ಯಾರು? ಎಂದು ಪ್ರಶ್ನಿಸಿದ್ದಾರೆ.
ಕಳೆದ ಮೂರು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ ಇರುವ ಕುರಿತು ಬೆಳಗಾವಿ ಅಧಿವೇಶನದಲ್ಲೇ ನಮ್ಮ ಪಕ್ಷದ ಮುಖಂಡರು ಪ್ರಶ್ನೆ ಮಾಡಲಾಗಿದ್ದರೂ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈವರೆಗೆ ಯಾವುದೇ ಉತ್ತರ ನೀಡಿಲ್ಲ. ಆ 5,000 ಕೋಟಿ ರೂಪಾಯಿ ಹಣ ಎಲ್ಲಿಗೆ ಮಾಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.”
ಕಾಂಗ್ರೆಸ್ ಸರ್ಕಾರ ತಾನು ಹೇಳಿಕೊಳ್ಳುವಂತೆ ಪ್ರಾಮಾಣಿಕವಾಗಿದ್ದರೆ, ತಕ್ಷಣವೇ ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು (ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು) ತನಿಖೆಗೆ ಒದಗಿಸಬೇಕು. ಇಲ್ಲವಾದಲ್ಲಿ, ಸಿಎಜಿ ಇದೊಂದು ಲೂಟಿ ಸರ್ಕಾರ ಎನ್ನುವುದು ಯಾವುದೇ ಅನುಮಾನವಿಲ್ಲದೆ ಸಾಬೀತಾಗುತ್ತದೆ ಎಂದು ದೂರಿದರು.