ಚಿತ್ರದುರ್ಗ ಸೆ. 07
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಮನುಷ್ಯರನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಬಾರದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ವಿಭಿನ್ನ ಧಾರ್ಮಿಕ ಗುರುತುಗಳಿದ್ದರೂ ಮೂಲತಃ ಮಾನವ ಜಾತಿಯೇ ಒಂದಾಗಿದೆ ಎಂಬ ಮಾನವೀಯ ಸಂದೇಶವನ್ನು ಶ್ರೀ ಶಾಂತವೀರ ಶರಣರು ನೀಡಿದರು.
ಚಿತ್ರದುರ್ಗ ನಗರದ ಜಮಾಅತೆ ಇಸ್ಲಾಮಿ ಹಿಂದ್, ಚಿತ್ರದುರ್ಗ; ಧಮ್ಮ ಜೈವಿಕ ಕೇಂದ್ರ, ಚಿತ್ರದುರ್ಗ; ಜಿಲ್ಲಾ ಶಾಂತಿ ಮತ್ತು ಸೌಹಾರ್ದ ವೇದಿಕೆ, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಧಮ್ಮ ಜೈವಿಕ ಕೇಂದ್ರದ ಬೋಧಿ ರಂಗಸ್ಥಳದಲ್ಲಿ ಹಮ್ಮಿಕೊಂಡಿದ್ದ ಧಮ್ಮ ರಂಗಮಂಡಲ ಕಟ್ಟಡದ ಉದ್ಘಾಟನೆ ಹಾಗೂ ಮಹಮ್ಮದ್ ಪೈಗಂಬರ್ ಅವರ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಭಾಗವಹಿಸಿ ಮಾತನಾಡಿದ ಶರಣರು, ಮನುಷ್ಯನನ್ನು ಯಾವುದೇ ಜಾತಿ ಅಥವಾ ಧರ್ಮದ ಆಧಾರದ ಮೇಲೆ ವಿಭಜಿಸದೆ, ಎಲ್ಲರನ್ನೂ ಸಮಾನವಾಗಿ ಕಾಣಬೇಕು ಧರ್ಮ, ಜಾತಿ ಮತ್ತು ಭೇದಭಾವಗಳನ್ನು ಮೀರಿ ಮಾನವೀಯತೆ, ಶಾಂತಿ, ಸ್ನೇಹ, ಸಹೋದರತೆ ಮತ್ತು ಸೌಹಾರ್ದತೆಯನ್ನು ಬೆಳೆಸುವುದು; ಮಹಮ್ಮದ್ ಪೈಗಂಬರ್ ಅವರ ಜೀವನ, ಆದರ್ಶ ಮತ್ತು ಸಂದೇಶಗಳನ್ನು ಪರಿಚಯಿಸುವುದು; ವಿವಿಧ ಧರ್ಮಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಅರಿತುಕೊಂಡು ಸಮಾಜದಲ್ಲಿ ಪರಸ್ಪರ ಗೌರವ ಮತ್ತು ಸಹಬಾಳ್ವೆಯನ್ನು ಬಲಪಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ಪ್ರಮುಖ ಭಾಗವಾಗಿ ಮಹಮ್ಮದ್ ಪೈಗಂಬರ್ ಅವರ ಜೀವನ ಮತ್ತು ಆದರ್ಶಗಳ ಕುರಿತು ಸಿರತ್ ಪ್ರವಚನ ನಡೆಯಿತು.ಅಬ್ದುಲ್ ರೆಹಮಾನ್ ಸಾನಿ ಇಮಾಮ್, ಬರ್ಲಿನ್ ಮಸ್ಜಿದ್, ಚಿತ್ರದುರ್ಗ ಅವರು ಪ್ರವಚನ ನೀಡಿ ಅವರು ಮಹಮ್ಮದ್ ಪೈಗಂಬರ್ ಅವರ ಬಾಲ್ಯ, ಜೀವನ, ವ್ಯಕ್ತಿತ್ವ, ಆದರ್ಶಗಳು, ಗುರಿ ಮತ್ತು ಉದ್ದೇಶಗಳ ಕುರಿತು ವಿವರಿಸಿ ಪೈಗಂಬರ್ ಅವರ ಜೀವನದಲ್ಲಿ ಕಂಡುಬರುವ ಪ್ರೀತಿ, ಕರುಣೆ, ಸತ್ಯ, ನ್ಯಾಯ, ಸಹಾಯ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಸಮಾಜದ ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರೊಫೆಸರ್ ಯಾದವರೆಡ್ಡಿ, ಹಿರಿಯ ಪತ್ರಕರ್ತರು ಹಾಗೂ ಜಿಲ್ಲಾ ಶಾಂತಿ ಮತ್ತು ಸೌಹಾರ್ದ ವೇದಿಕೆಯ ಅರುಣ್ ಕುಮಾರ್ ಮಾತನಾಡಿ ಪ್ರಪಂಚದ ವಿವಿಧ ಧರ್ಮಗಳು ಮಾನವ ಕಲ್ಯಾಣ ಮತ್ತು ಒಳ್ಳೆಯತನವನ್ನು ಸಾರುತ್ತವೆ. ಯಾವುದೇ ನಿಜವಾದ ಧರ್ಮವು ಮತ್ತೊಬ್ಬರಿಗೆ ಕೇಡು ಬಯಸು ವುದಿಲ್ಲ. ಪರಸ್ಪರ ಸಹಾಯ, ಪ್ರೀತಿ ಮತ್ತು ಮಾನವೀಯತೆ ಧರ್ಮಗಳ ಪ್ರಮುಖ ಮೌಲ್ಯಗಳಾಗಿವೆ ಎಂದು ತಿಳಿಸಿ ಧರ್ಮದ ಹೆಸರಿನಲ್ಲಿ ಜನರ ನಡುವೆ ಭಿನ್ನಾಭಿಪ್ರಾಯ ಮತ್ತು ಜಗಳವನ್ನು ಸೃಷ್ಟಿಸುವ ಪ್ರಯತ್ನಗಳನ್ನು ನಾವು ಅರ್ಥಮಾಡಿಕೊಂಡು, ಅವುಗಳಿಗೆ ಅವಕಾಶ ನೀಡದೆ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು ಎಂದು ಕರೆ ನೀಡಿದರು.
ಹಾಜಿ ದಾದಾಪೀರ್ ಮಾತನಾಡಿ ಜ್ಯೋತಿಯು ಆತ್ಮದ ಪ್ರತಿರೂಪವಾಗಿದೆ ಎಂಬ ಅರ್ಥಪೂರ್ಣ ವಿಚಾರವನ್ನು ವಿವರಿಸಿ ಎಲ್ಲಾ ಧರ್ಮಗ್ರಂಥಗಳಲ್ಲಿಯೂ ಮೂಲಭೂತವಾಗಿ ಒಂದೇ ಸಂದೇಶವಿದೆ. `ಮನುಷ್ಯನನ್ನು ಮನುಷ್ಯನಾಗಿ ನೋಡು, ಪ್ರೀತಿಯಿಂದ ಕಾಣುಎಂಬ ಮಾನವೀಯ ಸಂದೇಶವೇ ಎಲ್ಲ ಧರ್ಮಗಳ ಸಾರವಾಗಿದೆ ಎಂದು ಹೇಳಿ ಪರಸ್ಪರ ಪ್ರೀತಿ, ಗೌರವ ಮತ್ತು ಸಹೋದರತೆಯಿಂದ ಬದುಕುವುದೇ ನಿಜವಾದ ಧಾರ್ಮಿಕ ಮತ್ತು ಮಾನವೀಯ ಮೌಲ್ಯವಾಗಿದೆ ಎಂದು ತಿಳಿಸಿದರು. ದಾವಣಗೆರೆಯ ಗಾಂಧಾರಿ ವಿದ್ಯೆಯ ತರಬೇತುದರರಾದ ಶ್ರೀಮತಿ ರೇಖಾ ಬಿ., ಗಾಂಧಾರಿ ವಿದ್ಯೆಯ ಕುರಿತು ಮಾಹಿತಿ ನೀಡಿ ಕಿಶೋರಿಯರು ಮತ್ತು ವಿದ್ಯಾರ್ಥಿನಿಯರೊಂದಿಗೆ ಪ್ರಾತ್ಯಕ್ಷಿಕೆಯ ಮೂಲಕ `ಮೂರನೇ ಕಣ್ಣು ಎಂಬ ಪರಿಕಲ್ಪನೆಯನ್ನು ಆತ್ಮದೊಂದಿಗೆ ಸಂಬಂಧಿಸಿ ವಿವರಿಸಿದರು. ಆತ್ಮಜ್ಞಾನ ಮತ್ತು ಒಳನೋಟದ ಮೂಲಕ ನಮ್ಮ ಸುತ್ತಲಿನ ವ್ಯಕ್ತಿಗಳನ್ನು ಹಾಗೂ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವ ಕುರಿತು ಮಾಹಿತಿ ನೀಡಿದರು.
ವಿಮುಕ್ತಿ ವಿದ್ಯಾ ಸಂಸ್ಥೆಯ ನಿರ್ದೇಶಕರು ಹಾಗೂ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಮಾತನಾಡಿ, ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಅತ್ಯಂತ ಅಗತ್ಯವಾಗಿವೆ ಎಂದು ತಿಳಿಸಿದರು.
ಆರ್. ವಿಶ್ವಸಾಗರ್ ಮಾತನಾಡಿ ಮಹಮ್ಮದ್ ಪೈಗಂಬರ್ ಅವರ ಆದರ್ಶಗಳು ಹಾಗೂ ಬುದ್ಧ, ಬಸವಣ್ಣ ಮತ್ತು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳಲ್ಲಿರುವ ಸಾಮ್ಯತೆಯನ್ನು ವಿವರಿಸಿ ಮಾನವೀಯತೆ, ಸಮಾನತೆ, ಪ್ರೀತಿ, ನ್ಯಾಯ ಮತ್ತು ಸಹೋದರತೆಯ ಮೌಲ್ಯಗಳು ಎಲ್ಲರಿಗೂ ಸಾಮಾನ್ಯವಾಗಿವೆ. ಆದ್ದರಿಂದ ಯಾವುದೇ ಧರ್ಮದ ಬಗ್ಗೆ ತಾರತಮ್ಯ ಮಾಡದೆ ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಸ್ಜಿದ್ ಅಲಾ ವತಿಯಿಂದ ಡಾ. ರಹಮತುಲ್ಲಾ, ಅಮೀರ್ ಮುಖಮಿ, ಝುಬೇರ್ ಅನ್ಸಾರಿ, ಸಲ್ಮಾ, ರೇಷ್ಮಾ ಬಾನು, ಮುಬೀನಾ ಬಾನು ಕುಮಾರ್ ಟಿ. ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಸಿಬ್ಬಂದಿ ಮತ್ತು ತಂಡದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ನೀಲಯ್ಯನಹಟ್ಟಿಯ ಕಿಶೋರಿಯರು ನಾತ್ ಮೂಲಕ ಪ್ರಾರಂಭಿಸಿದರು. ನಾಗರತ್ನ ಸ್ವಾಗತಿಸಿದರು. ಬೀಬಿಜಾನ್ ಕಾರ್ಯಕ್ರಮ ವನ್ನು ನಿರೂಪಿಸಿದರು. ಸಲ್ಮಾ ವಂದಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಿಶೋರಿಯರಿಗೆ ನೋಟ್‍ಬುಕ್ , ಪೆನ್ ಮತ್ತು ಸಿಹಿ ನೀಡಿ ಪ್ರೋತ್ಸಾಹಿಸಲಾಯಿತು.
ಮಹಮ್ಮದ್ ಪೈಗಂಬರ್, ಬುದ್ಧ, ಬಸವಣ್ಣ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಅರಿತುಕೊಂಡು ಸಮಾಜದಲ್ಲಿ ಜಾತಿ ಧರ್ಮದ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು ಎಂಬ ಮಹತ್ವದ ಸಂದೇಶವನ್ನು ಕಾರ್ಯಕ್ರಮ ನೀಡಿತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j