ರೈಲು ಮಾರ್ಗದಿಂದ ಗಣಿಗಾರಿಕೆ ಮಾಡಿದರೆ ಗ್ರಾಮೀಣ ಬದುಕಿಗೆ ಧಕ್ಕೆ ಆಗುವುದಿಲ್ಲ: ದರ್ಶನ್ ಪುಟ್ಟಣ್ಣಯ್ಯ

ಪೋಟೋ ಮತ್ತು ವರದಿ ವೇದಮೂರ್ತಿ ಭೀಮಸಮುದ್ರ

ರಸ್ತೆ ಮಾರ್ಗವನ್ನು ಬಿಟ್ಟು ರೈಲು ಭೋಗಿಗಳ ಮೂಲಕ ಗಣಿಗಾರಿಕೆ ಸಾಗಾಟ ನಡೆಸಿದರೆ ಸ್ಥಳೀಯ ರಸ್ತೆ, ಪರಿಸರ ಹಾಗೂ ಜನಜೀವನಕ್ಕೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬಹುದು ಎಂದು ರೈತ ಸಂಘದ ಹೋರಾಟಗಾರರು ಹಾಗೂ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.

ಭೀಮಸಮುದ್ರದಿಂದ ವಿ. ಪಾಳ್ಯ ಗ್ರಾಮದವರೆಗೆ ರಸ್ತೆ ವೀಕ್ಷಣೆ ನಡೆಸಿದ ಬಳಿಕ ಮಾತನಾಡಿದ ಅವರು, ಗಣಿಗಾರಿಕೆ ಕಂಪನಿಗಳಿಂದ ಪ್ರತಿದಿನ ಸುಮಾರು 100 ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಹೇಳಿದರು. ಈ ರಸ್ತೆಯಲ್ಲಿ ಈಗಾಗಲೇ 100 ರಿಂದ 150ಕ್ಕೂ ಹೆಚ್ಚು ಬೈಕ್ ಸವಾರರು ಅಪಘಾತಕ್ಕೀಡಾಗಿದ್ದಾರೆ ಎಂಬ ಮಾಹಿತಿ ವಿಷಾದಕರವಾಗಿದೆ ಎಂದರು.

ರಾತ್ರಿ ವೇಳೆ 108 ಆಂಬುಲೆನ್ಸ್ ಸೇವೆ ಸಮರ್ಪಕವಾಗಿ ಲಭ್ಯವಿಲ್ಲ, ಗರ್ಭಿಣಿಯರು ಹಾಗೂ ವೃದ್ಧರಿಗೆ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ಪಡೆಯಲು ತೊಂದರೆಯಾಗಿದೆ. ಇಂತಹ ಗಂಭೀರ ಸಮಸ್ಯೆಗಳಿದ್ದರೂ ರಸ್ತೆ ರಿಪೇರಿ ಕಡೆ ನಿರ್ಲಕ್ಷ್ಯ ತೋರಿರುವುದು ಖಂಡನೀಯ ಎಂದು ಅವರು ಹೇಳಿದರು.

ಗಣಿಗಾರಿಕೆ ಕಂಪನಿಗಳ CSR ನಿಧಿಯನ್ನು ರಸ್ತೆ ರಿಪೇರಿ, ಹೈಟೆಕ್ ಆಸ್ಪತ್ರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಹಾಗೂ ರೈತರಿಗೆ ಬೆಳೆ ನಷ್ಟ ಪರಿಹಾರಕ್ಕೆ ಬಳಸಬೇಕು ಎಂದು ದರ್ಶನ್ ಪುಟ್ಟಣ್ಣಯ್ಯ ಒತ್ತಾಯಿಸಿದರು. ಧೂಳಿನಿಂದಾಗಿ ಇಲ್ಲಿನ ತೆಂಗು, ಅಡಿಕೆ, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ಹಾನಿಗೊಳಗಾಗಿವೆ ಎಂದು ಸ್ಥಳ ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದರು.

ಅಡಿಕೆ ಬೆಳೆ ಬೆಂಬಲ ಬೆಲೆ ಕುರಿತು ಮಾತನಾಡಿದ ಅವರು, ಸರ್ಕಾರದ ಮೇಲೆ ಒತ್ತಡ ತಂದು ಅಡಿಕೆ, ತೆಂಗು, ಮೆಕ್ಕೆಜೋಳ, ಈರುಳ್ಳಿ ಮತ್ತಿತರ ಬೆಳೆಗಳಿಗೆ ಬೆಂಬಲ ಬೆಲೆ ಹಾಗೂ ಬೆಳೆ ವಿಮೆ ನೀಡುವಂತೆ ಶಾಸನಸಭೆಯಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಭೂತಯ್ಯ ಮಾತನಾಡಿ, ಈ ತಿಂಗಳ 22ರಂದು ಭೀಮಸಮುದ್ರಕ್ಕೆ ಹಿರೇಮಠ್ ಹಾಗೂ ದರ್ಶನ್ ಪುಟ್ಟಣ್ಣಯ್ಯ ಆಗಮಿಸಿ, ರಸ್ತೆ ಸ್ಥಿತಿ ಮತ್ತು ಸ್ಥಳೀಯರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಭೀಮಸಮುದ್ರ ರೈತ ಸಂಘದ ಮುಖಂಡರುಗಳು ದರ್ಶನ್ ಪುಟ್ಟಣ್ಣಯ್ಯ ಅವರನ್ನು ಹೂವಿನ ಹಾರ ಹಾಗೂ ಪಟಾಕಿಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಮಂಡ್ಯ ಹಾಗೂ ಚಿತ್ರದುರ್ಗ ಜಿಲ್ಲೆಗಳ ರೈತ ಸಂಘದ ಮುಖಂಡರುಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *