ಗಮಕವು ಸಂಗೀತಕ್ಕೆ ಮೆರಗು ಹಚ್ಚಬಲ್ಲದು -ಡಾ .ಎಂ. ದ್ವಾರಕೀಶ್.

ಚಿತ್ರದುರ್ಗ ,ಜೂ,30:

ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘವು ತನ್ನ 40ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ ನಡೆಸುತ್ತಿರುವ ಮಾಸಿಕ ಗಮಕ ಸರಣಿಯ 35ನೇ ಕಾರ್ಯಕ್ರಮವು ನಗರದ ಜೆಸಿಆರ್ ಗಣಪತಿ ದೇವಾಲಯದಲ್ಲಿ ನೆರವೇರಿತು.

ಭಜನೆಗಳಲ್ಲಿ ಗಮಕ ಎಂಬ ವಿಷಯಕ್ಕೆ ಸಂಬಂಧಿಸಿದ ಈ ಸಮಾವೇಶದ ಮುಖ್ಯ ಅತಿಥಿಗಳೂ ಸಂಸ್ಕೃತ ಹಾಗೂ ಕನ್ನಡ ಭಾಷೆಗಳ ವಿದ್ವಾಂಸರೂ , ವೀಣಾವಾದನ ಪರಿಣತರು ಆದ ಡಾ .ಎಮ್ .ದ್ವಾರಕೀಶ್ ಅವರು ತಮ್ಮ ಭಾಷಣದಲ್ಲಿ ಭಾರತೀಯ ಪರಂಪರೆಯ ಕಲಾ ಪ್ರಕಾರಗಳಲ್ಲಿ ಗಮಕಕ್ಕೂ ಒಂದು ಸ್ಥಾನವಿದೆ. ಕಾವ್ಯದ ರಸಭಾವಗಳನ್ನು ಉದ್ದೀಪಿಸಿ ಕವಿಯ ಅಂತರ್ಯವನ್ನು ಪರಿಣಾಮಕಾರಿಯಾಗಿ ರಸಿಕರಿಗೆ ಮುಟ್ಟಿಸುವುದೇ ಗಮಕದ ಮುಖ್ಯ ಉದ್ದೇಶ. ಗಮಕ ಕಲೆಯು ಸಂಗೀತದೊಂದಿಗೆ ಹಿತಮಿತವಾಗಿ ಬೆರೆತರೆ ಶೋತೃಗಳ ರಸಾನುಭೂತಿಯು ಉತ್ತುಂಗಕ್ಕೇರಬಲ್ಲುದು. ಆದ್ದರಿಂದ ಸಂಗೀತಾಭ್ಯಾಸಿಗಳು ಸಂಗೀತದ ಜೊತೆ ಜೊತೆಗೆ ಗಮಕಲೆಯನ್ನೂ ಮೈಗೂಡಿಸಿಕೊಂಡರೆ ಅವರ ಕಲಾ ಸಾಧನೆಯು ಅತ್ಯಂತ ಪರಿಣಾಮಕಾರಿಯಾಗಬಲ್ಲದು ಎಂದರು.

ಚಿತ್ರದುರ್ಗ ಹೆಸರಾಂತ ಸಂಗೀತ ಕಲಾವಿದೆ ವಿದುಷಿ ಶ್ರೀಮತಿ ಶೈಲಾ ಸುದರ್ಶನ್ ಅವರು ತಮ್ಮ ಸೌಂದರ್ಯ ಲಹರಿ ಬಳಗದ ಶಿಷ್ಯರೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿವಿಧ ರಾಗಗಳೊಂದಿಗೆ ಸಾದರಪಡಿಸಿದ ಭಕ್ತಿ ಸಂಗೀತವು ಸಾಹಿತ್ಯ ,ಸಂಗೀತ ,ರಾಗ, ತಾಳ ,ಭಾವಗಳ ಹಿತಕರ ಸಮ್ಮಿಲನದೊಂದಿಗೆ ನೆರೆದಿದ್ದ ಶೋತೃಗಳ ಭಕ್ತಿ ಭಾವವನ್ನು ಉದ್ದೀಪಿಸಿತು. ಶೃಂಗೇರಿ ಶಾರದಾ ದೇವಿಯ ಸ್ತುತಿಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ 15 ವೈವಿಧ್ಯಮಯ ಗೀತೆಗಳು ಗಾಯನವಾಯಿತು.

ಇದೇ ಸಭೆಯಲ್ಲಿ ಡಾ.ಎಮ್. ದ್ವಾರಕೀಶ್ ಅವರನ್ನು ಅವರ ಉನ್ನತ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಂಗೀತ ಕಲಾವಿದರನ್ನೂ ಸತ್ಕರಿಸಲಾಯಿತು. ಶಶಿಧರ್ ಶ್ಯಾನುಭೋಗ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯನ್ನು ಬಿ. ಎಲ್ .ಉಮಾ ನಿರ್ವಹಿಸಿದರು. ಗಮಕಿ ಅನಂತ ಕೃಷ್ಣ ಸ್ವಾಗತಿಸಿದರು .ಕೆ .ಆರ್ .ರಮಾದೇವಿ ವೆಂಕಣ್ಣಾಚಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಪ್ರೊ.ಹರೀಶ್, ಚಿದಾನಂದಪ್ಪ, ರಾಜಶೇಖರಪ್ಪ, ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಮಾಸಿಕ ಕಾರ್ಯಕ್ರಮ-: 36ನೇ ಮಾಸಿಕ ಗಮಕ ಕಾರ್ಯಕ್ರಮವು ದಿನಾಂಕ 26/ 7/ 2026ರ ಭಾನುವಾರ ಸಂಜೆ 6 ಗಂಟೆಗೆ ಜೆಸಿಆರ್ ಗಣಪತಿ ದೇವಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ಅದರಲ್ಲಿ ಕನ್ನಡ ವಿದ್ವಾಂಸರೂ, ಕವಯತ್ರಿಯೂ, ವಿಮರ್ಶಕರು ಆದ ತಾರಿಣಿ ಶುಭದಾಯಿನಿ ಅವರು ಮಹಾಭಾರತದಲ್ಲಿ ಭೀಷ್ಮರ ವೈಶಿಷ್ಟ್ಯ ಎಂಬ ವಿಷಯ ಕುರಿತು ಉಪನ್ಯಾಸ ನೀಡುವರು. ವಿದುಷಿ ಮೀನಾಕ್ಷಿ ಭಟ್ ಅವರು ಭೀಷ್ಮ ಪರ್ವದ ಸುರಸ ಪದ್ಯಗಳನ್ನು ವಾಚನ ಮಾಡುವರೆಂದು ತಿಳಿಸಿದ್ದಾರೆ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *