ಯುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಅಮೋಘ ಅಜೇಯ ಶತಕ ಹಾಗೂ ಬೌಲರ್ಗಳ ಸಂಘಟಿತ ಪ್ರದರ್ಶನದ ಬಲದಿಂದ ಆತಿಥೇಯ ಸನ್ರೈಸರ್ಸ್ ಹೈದರಾಬಾದ್ (SRH) ತಂಡವು ಐಪಿಎಲ್ 2026ರ (IPL 2026) 31ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ 47 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಈ ಗೆಲುವಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ಪ್ರಸಕ್ತ ಲೀಗ್ನಲ್ಲಿ 4ನೇ ಜಯ ತನ್ನದಾಗಿಸಿಕೊಂಡಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಮತ್ತೊಂದೆಡೆ, ಗುರಿ ಬೆನ್ನಟ್ಟುವಲ್ಲಿ ಎಡವಿದ ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ 5ನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ.
ಅಭಿಷೇಕ್ ಶರ್ಮಾ ಅಬ್ಬರ, ಸನ್ರೈಸರ್ಸ್ಗೆ ಬೃಹತ್ ಮೊತ್ತ: ಮಂಗಳವಾರ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 242 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಜೋಡಿ ಡೆಲ್ಲಿ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಪವರ್ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 67 ರನ್ ಸಿಡಿಸಿದ ಈ ಜೋಡಿ, ಮೊದಲ ವಿಕೆಟ್ಗೆ ಕೇವಲ 53 ಎಸೆತಗಳಲ್ಲಿ 97 ರನ್ಗಳ ಭದ್ರ ಬುನಾದಿ ಹಾಕಿಕೊಟ್ಟಿತು. ಟ್ರಾವಿಸ್ ಹೆಡ್ 26 ಎಸೆತಗಳಲ್ಲಿ 37 ರನ್ ಗಳಿಸಿ ಔಟಾದರು. ನಂತರ ಬಂದ ಇಶಾನ್ ಕಿಶನ್ ಕೇವಲ 13 ಎಸೆತಗಳಲ್ಲಿ 25 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಐಪಿಎಲ್ ವೃತ್ತಿಜೀವನದ 2ನೇ ಶತಕ ಸಿಡಿಸಿದ ಅಭಿಷೇಕ್: ಒಂದು ತುದಿಯಲ್ಲಿ ಭದ್ರವಾಗಿ ನೆಲೆಯೂರಿದ್ದ ಅಭಿಷೇಕ್ ಶರ್ಮಾ, ಡೆಲ್ಲಿ ಬೌಲರ್ಗಳ ಬೆವರಿಳಿಸಿದರು. ಕೇವಲ 47 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಒಟ್ಟು 68 ಎಸೆತಗಳನ್ನು ಎದುರಿಸಿ 10 ಭರ್ಜರಿ ಸಿಕ್ಸರ್ ಹಾಗೂ 10 ಬೌಂಡರಿಗಳ ನೆರವಿನಿಂದ 198.53ರ ಸ್ಟ್ರೈಕ್ ರೇಟ್ನಲ್ಲಿ ಅಜೇಯ 135 ರನ್ ಚಚ್ಚಿದರು. ಇದು ಅವರ ಐಪಿಎಲ್ ವೃತ್ತಿಜೀವನದ ಎರಡನೇ ಶತಕವಾಗಿದೆ. ಅಂತಿಮ ಓವರ್ಗಳಲ್ಲಿ ಕ್ರೀಸ್ಗರ್ತಿಸಿದ ಹೆನ್ರಿಕ್ ಕ್ಲಾಸೆನ್ ಕೇವಲ 13 ಎಸೆತಗಳಲ್ಲಿ ಅಜೇಯ 37 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 240ರ ಗಡಿ ದಾಟಿಸಿದರು. ಇವರಿಬ್ಬರು ಮೂರನೇ ವಿಕೆಟ್ಗೆ 66 ರನ್ಗಳ ಮುರಿಯದ ಜೊತೆಯಾಟವಾಡಿದರು.
ಡೆಲ್ಲಿ ಕ್ಯಾಪಿಟಲ್ಸ್ ದಿಟ್ಟ ಹೋರಾಟ, ಆದರೆ ಗೆಲುವಿನ ದಡ ಸೇರಲಿಲ್ಲ: 243 ರನ್ಗಳ ಬೃಹತ್ ಹಾಗೂ ಕಠಿಣ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 195 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಮೊತ್ತ 21 ರನ್ ಆಗಿರುವಾಗಲೇ ಪಥುಮ್ ನಿಸ್ಸಾಂಕ ವಿಕೆಟ್ ಕಳೆದುಕೊಂಡ ಡೆಲ್ಲಿ, ಪವರ್ಪ್ಲೇ ಅಂತ್ಯಕ್ಕೆ 59 ರನ್ ಗಳಿಸಿತ್ತು. ಕೆ.ಎಲ್. ರಾಹುಲ್ 23 ಎಸೆತಗಳಲ್ಲಿ 37 ರನ್ ಗಳಿಸಿ ನಿರ್ಗಮಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಆಟವಾಡಿದ ನಿತೀಶ್ ರಾಣಾ 30 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 57 ರನ್ ಗಳಿಸಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ, ಸನ್ರೈಸರ್ಸ್ ಬೌಲರ್ ಇಶಾನ್ ಮಾಲಿಂಗ ಅವರ ಬುದ್ಧಿವಂತಿಕೆಯ ಎಸೆತಕ್ಕೆ ರಾಣಾ ಬಲಿಯಾದರು. ಉತ್ತಮವಾಗಿ ಆಡುತ್ತಿದ್ದ ಟ್ರಿಸ್ಟನ್ ಸ್ಟಬ್ಸ್ (16 ಎಸೆತಗಳಲ್ಲಿ 27 ರನ್) ಹಾಗೂ ಡೇವಿಡ್ ಮಿಲ್ಲರ್ (ಶೂನ್ಯ) ಅವರನ್ನು ಕೂಡ ಇಶಾನ್ ಮಾಲಿಂಗ ಪೆವಿಲಿಯನ್ಗಟ್ಟಿದರು. ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಸಮೀರ್ ರಿಜ್ವಿ 28 ಎಸೆತಗಳಲ್ಲಿ 41 ರನ್ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರುಮಾಡಲು ಸಾಧ್ಯವಾಗಲಿಲ್ಲ.
ಇಶಾನ್ ಮಾಲಿಂಗ, ಹರ್ಷ್ ದುಬೆ ಮಾರಕ ದಾಳಿ: ಸನ್ರೈಸರ್ಸ್ ಹೈದರಾಬಾದ್ ಪರ ಮಾರಕ ಬೌಲಿಂಗ್ ದಾಳಿ ಸಂಘಟಿಸಿದ ಇಶಾನ್ ಮಾಲಿಂಗ ತಮ್ಮ 4 ಓವರ್ಗಳ ಕೋಟಾದಲ್ಲಿ ಕೇವಲ 32 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಅಂತಿಮ ಓವರ್ ಎಸೆದ ಹರ್ಷ್ ದುಬೆ ಒಂದೇ ಓವರ್ನಲ್ಲಿ 3 ವಿಕೆಟ್ ಕಬಳಿಸಿ ಡೆಲ್ಲಿ ಪಡೆಯನ್ನು ನಿಯಂತ್ರಿಸಿದರು.
ಪಂದ್ಯದ ಸಂಕ್ಷಿಪ್ತ ಸ್ಕೋರ್:
- ಸನ್ರೈಸರ್ಸ್ ಹೈದರಾಬಾದ್: 20 ಓವರ್ಗಳಲ್ಲಿ 242/2 (ಅಭಿಷೇಕ್ ಶರ್ಮಾ 135*, ಟ್ರಾವಿಸ್ ಹೆಡ್ 37, ಹೆನ್ರಿಕ್ ಕ್ಲಾಸೆನ್ 37*)
- ಡೆಲ್ಲಿ ಕ್ಯಾಪಿಟಲ್ಸ್: 20 ಓವರ್ಗಳಲ್ಲಿ 195/9 (ನಿತೀಶ್ ರಾಣಾ 57, ಸಮೀರ್ ರಿಜ್ವಿ 41, ಕೆ.ಎಲ್. ರಾಹುಲ್ 37; ಇಶಾನ್ ಮಾಲಿಂಗ 4/32, ಹರ್ಷ್ ದುಬೆ 3 ವಿಕೆಟ್)
- ಫಲಿತಾಂಶ: ಸನ್ರೈಸರ್ಸ್ ಹೈದರಾಬಾದ್ಗೆ 47 ರನ್ಗಳ ಜಯ.

