ಎಲ್ಲರೂ ಎಲ್ಲರ ಜೊತೆಗೆ ಜಾತಿಬೇಧ ಮರೆತು ಬೆರಿತಾ ಇದಾರೆ ಅಂದರೆ ಬಹುಃಶ ಅವರೇ ಕಾರಣ, ಶಾಲೆಗಳಲ್ಲಿ ಬೇಧಭಾವ ಇಲ್ಲದೇ ಎಲ್ಲಾ ಮಕ್ಕಳು ಒಟ್ಟಾಗಿ ಒಂದಾಗಿ ಇದಾರೆ ಅದಕ್ಕೂ ಅವರೇ ಕಾರಣ, ಜಗತ್ತಿನಲ್ಲಿ ಯಾವುದಾದರೂ ದೇಶದಲ್ಲಿ ಏನೇ ಸಮಸ್ಯೆ ತಲೆದೋರಿದರೂ ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಒಂದು ಹಂತಕ್ಕೆ ಸದೃಢವಾಗಿದ್ದರೆ ಅದಕ್ಕೂ ಅವರೇ ಕಾರಣ, ಹೆಣ್ಣು ಮಕ್ಕಳು ಶಿಕ್ಷಣ ಪಡೀತಾ ಇರೋದಕ್ಕೆ, ಅದರ ಮೂಲಕ ಎಲ್ಲಾ ರಂಗದಲ್ಲೂ ತೊಡಗಿಸಿಕೊಂಡು ಸಾಧನೆ ಮಾಡ್ತಾ ಇರೋದಕ್ಕೆ ಅವರೇ ಕಾರಣ ಸಮಾಜದಲ್ಲಿ ತುಳಿತಕ್ಕೆ ಒಳಗಾದವರು, ಹಿನ್ನೆಲೆಯಲ್ಲಿ ಇದ್ದವರು ಎಲ್ಲರೊಂದಿಗೆ ಬಾಳೋಕೆ ಅವಕಾಶ ಸಿಕ್ಕಿರೋದಕ್ಕೂ ಅವರೇ ಕಾರಣ ಹೀಗೇ ಹೇಳ್ತಾ ಹೋದರೆ ಬಹಳಷ್ಟು ಒಳಿತಿನ ಕೆಲಸಕ್ಕೆ ಇವರ ಕೊಡುಗೆಯೇ ಕಾರಣ ಅವರೇ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್.
ಬಾಲ್ಯದಲ್ಲಿಯೇ ಜಾತಿಯಿಂದಾಗಿ ತುಳಿತಕ್ಕೆ ಒಳಗಾದರೂ ವಿದ್ಯೆ ಎಂಬುದನ್ನೇ ಅಸ್ತ್ರವಾಗಿಸಿಕೊಂಡು ಬಂದ ಎಲ್ಲಾ ಸಮಸ್ಯೆಗಳನ್ನು ಸವಾಲು ಎಂದು ಸ್ವೀಕರಿಸಿ ಮೆಟ್ಟಿ ಮುನ್ನಡೆದು ತನ್ನ ಗುರಿಯೆಡೆಗೆ ಸಾಗಿದ ರೀತಿಯೇ ರೋಚಕ. ಒಂದಿಷ್ಟು ವರ್ಷಗಳ ಹಿಂದೆ ಖಾಸಗಿ ವಾಹಿನಿಯಲ್ಲಿ ‘ಮಹಾನಾಯಕ’ ಎನ್ನುವ ಹೆಸರಿನ ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯ. ದಿನವೂ ಸಂಜೆ ಕೆಲಸ ಮುಗಿಸಿ ಇದನ್ನು ನೋಡಲು ಮಕ್ಕಳು ಹಿರಿಯರು, ಪುರುಷರೆಂಬ ಬೇಧವಿಲ್ಲದೇ ನೋಡುತ್ತಿದ್ದರು. ಇಂದು ಎಲ್ಲಾ ರೀತಿಯ ಸವಲತ್ತುಗಳಿದ್ದರೂ ಓದಲು ಮನಸ್ಸು ಮಾಡದ, ಓದಿನ ಬಗ್ಗೆ ಅನಾದಾರವನ್ನು ತೋರುವ ಮಕ್ಕಳು, ಯುವಜನತೆಗೆ ಪೋಶಕರು ‘ಈ ಧಾರಾವಾಹಿ ನೋಡಿಯಾದರೂ ಓದುವುದರ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ’ ಎಂದು ಹೇಳುತ್ತಿದ್ದರು ಎಂಬುದನ್ನು ಕೇಳಿದ್ದೇನೆ. ದಿನಕಳೆದಂತೆ ಧಾರಾವಾಹಿಯ ಪ್ರಸಾರದ ಸಮಯ ಬದಲಾಯಿತು ದಿನಕಳೆದಂತೆ ಆ ಧಾರಾವಾಹಿಯ ಪ್ರಸಾರವೇ ನಿಂತು ಹೋಗಿದ್ದು ನಿಜಕ್ಕೂ ಬೇಸರ. ಆ ಧಾರಾವಾಹಿಯ ಮೂಲಕ ಓದಲು ಪ್ರೇರೇಪಣೆ ಸಿಕ್ಕಿದ್ದಂತೂ ಸುಳ್ಳಲ್ಲ.
ಒಂದಿಷ್ಟು ವರ್ಷಗಳ ಹಿಂದೆ ವಾರ್ತಾ ಮತ್ತು ಪ್ರಸಾರ ಇಲಾಖೆಯಿಂದ ‘ಭಾರತ ಭಾಗ್ಯವಿಧಾತ’ ಎನ್ನುವ ವಿಶೇಷ ಕಾರ್ಯಕ್ರಮವನ್ನು ರೂಪಿಸಿದ್ದರು. ನಗರದಲ್ಲಿ ಅದರ ಪ್ರದರ್ಶನ ಎಂದಾಗ ರಾಷ್ಟ್ರಗೀತೆಯ ಸಾಲು ಆಗಿದ್ದರಿಂದ ಬಹುತೇಕ ಅದರ ರಚನಾಕಾರರ ಬಗ್ಗೆ ಈ ದೃಶ್ಯರೂಪಕ ಇರಬೇಕೆಂದು ಹೋಗಿದ್ದೆ. ರೂಪಕ ಆರಂಭವಾಗಿ ಇಪ್ಪತ್ತು ನಿಮಿಷವಾದರೂ ‘ಆ ನನ್ನಪ್ಪ ಇಷ್ಟೆಲ್ಲ ಒಳ್ಳೆಯದು ಮಾಡಿದ. ಇದಕ್ಕೆಲ್ಲ ಕಾರಣ ಆ ನನ್ನಪ್ಪ ಭಾರತ ಭಾಗ್ಯವಿಧಾತ’ ಅಂತ ಅಷ್ಟೇ ಹೇಳ್ತಾ ಇದ್ದರು. ಎಲ್ಲರಿಗೂ ಒಳಿತು ಆಗ್ತಾ ಇದೆ ಅಂದರೆ ಅದರಲ್ಲಿ ಬಹುಪಾಲು ಕೊಡುಗೆ ಇವರದ್ದೇ ಅಂತ ಹೇಳ್ತಾ ಇದ್ದರು. ಅದಾಗಿ ಕೆಲವು ಸಮಯದ ನಂತರ ಅದು ಡಾ.ಬಿ.ಆರ್.ಅಂಬೇಡ್ಕರ್ ಅಂದಾಗ ‘ನಿಜವಾಗಿಯೂ ಇಷ್ಟೆಲ್ಲಾ ಒಳಿತಿನ ಕೆಲಸಗಳನ್ನು ಮಾಡಿದ್ದು ಇವರೇ ಎಂಬುದನ್ನು ಅದ್ಭುತವಾಗಿ ಕಟ್ಟಿಕೊಟ್ಟರು. ಮೈಸೂರು ಮಹಾರಾಜರು, ಬರೋಡಾದ ಮಹಾರಾಜರು ಓದು, ವಿದ್ಯೆ ಎಂಬುದಕ್ಕೆ ಕೊಟ್ಟ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದ್ದು, ಮರದಲ್ಲಿ ಆಟವಾಡುವ ಮಕ್ಕಳಿಗೆ ‘ಮರದಲ್ಲಿ ದೆವ್ವ ಇದೆ’ ಎಂದಾಗ ಅದು ಹೇಗಿರಬಹುದು ಎಂದು ಕಾದು ಮರದ ಮೇಲೆ ಕುಳಿತು ಏನೊಂದು ಕಾಣದೇ ಇದ್ದಾಗ ‘ಶಹಬ್ಬಾಶ್ ಭೀಮ ಪ್ರಶ್ನೆ ಮಾಡದೇ ಏನನ್ನೂ ಒಪ್ಪಿಕೊಳ್ಳಬಾರದು ಎಂಬುದನ್ನು ಬಿಡಬೇಡ’ ಎಂಬುದನ್ನು ಅವನ ಗುರುಗಳು ಹೇಳಿದ್ದನ್ನು ಸದಾ ಜೀವನದಲ್ಲಿ ಅಳವಡಿಸಿಕೊಂಡು ಪ್ರಶ್ನೆ ಕೇಳುತ್ತಲೇ ಎಲ್ಲಾ ಸತ್ಯವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದು ನಮಗೂ ಮಾದರಿಯಾಗಬೇಕು. ಯಾವ ಕೆರೆಯ ನೀರನ್ನು ಕುಡಿಯುವುದಿರಲಿ ಮುಟ್ಟಲು ಬಿಡದ ಸಂದಿಗ್ದ ಪರಿಸ್ಥಿತಿಗಳನ್ನು ಮೆಟ್ಟಿನಿಂತು ಸಾಧಿಸಿ ಇಂದು ಅದೇ ಕೆರೆಯ ಮೇಲ್ಭಾಗದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣವಾಗಿರುವುದು ಹೆಮ್ಮೆಯ ಸಂಗತಿಯಲ್ಲವೇ? ಬೆಳೆಯಬೇಕೆಂದವರಿಗೆ ಇದು ಮಾದರಿಯಲ್ಲವೇ?
ಕೊಲಂಬಿಯ ವಿಶ್ವವಿದ್ಯಾಲಯವು ತನ್ನ ೨೫೦ ನೇ ವರ್ಷದ ಸಂದರ್ಭದಲ್ಲಿ ಇಷ್ಟು ವರ್ಷಗಳಲ್ಲಿ ಇಲ್ಲಿ ಓದುವಾಗಲೂ ಉತ್ತಮ ವಿದ್ಯಾರ್ಥಿಯಾಗಿದ್ದು, ಇಲ್ಲಿ ಕಲಿತ ಜ್ಞಾನವನ್ನು ಜಗತ್ತಿನ ಒಳಿತಿಗಾಗಿ ಬಳಸಿದ ಉತ್ತಮ ವಿದ್ಯಾರ್ಥಿಯನ್ನು ಆಯ್ಕೆ ಮಾಡುವಾಗ ಅವರಿಗೆ ಎಲ್ಲಾ ರೀತಿಯಲ್ಲೂ ಉತ್ತಮ ಎನಿಸಿದ ವಿದ್ಯಾರ್ಥಿ ನಮ್ಮ ಭಾರತೀಯ ಅಂಬೇಡ್ಕರ್ ಎಂಬುದು ನಮ್ಮೆಲ್ಲರ ಹೆಮ್ಮೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಅಂಬೇಡ್ಕರ್ ಅವರ ಮೂರ್ತಿಯನ್ನು ಅನಾವರಣ ಮಾಡಿದ್ದು ಮತ್ತೊಂದು ಸಂತೋಷದ ಸಂಗತಿ. ಬಡತನವ ಮೆಟ್ಟಿ ಎಲ್ಲರಿಗೂ ಒಳಿತಾಗುವ ಕೆಲಸದ ಮೂಲಕವೇ ಮಾತನಾಡಿದ್ದು ಅಂಬೇಡ್ಕರ್.
‘ಕೇವಲ ಯಾವುದೋ ಒಂದು ಜಾತಿ, ವರ್ಗಕ್ಕೆ ಮಾತ್ರವಲ್ಲದೇ ಪ್ರತಿಯೊಬ್ಬ ಪ್ರಜೆಯ ಒಳಿತಿಗಾಗಿ ನಾನು ಪ್ರಯತ್ನ ಪಟ್ಟಿದ್ದೇನೆ. ಅನುಮಾನವಿದ್ದರೆ ಸಂವಿಧಾನವನ್ನು ಒಮ್ಮೆ ನೋಡಿ’ ಎಂದಿದ್ದಾರೆ. ಜೊತೆಗೆ ತಾವು ಸದಾ ಸೂಟು-ಬೂಟು ಹಾಕಿರುವುದು ನನ್ನ ಜಾತಿಯವರಿಗೆ ಇದು ಸಾಧ್ಯವಿದೆ ಎಂಬುದು ತೋರಿಸಲು ಸಿಕ್ಕ ಅವಕಾಶ ಎಂದಿದ್ದಾರೆ. ತಮ್ಮ ತಪ್ಪಿದ್ದರೂ ರಾಜೀನಾಮೆ ನೀಡದ ಇಂದಿನ ಶಾಸಕ, ಸಂಸದ, ಮಂತ್ರಿಗಳ ನಡುವೆ ತಾನು ಅಂದುಕೊಂಡಂತೆ ಎಲ್ಲರಿಗೂ ನ್ಯಾಯ ಒದಗಿಸಲಾಗಲಿಲ್ಲ ಎಂದು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹನೀಯ ಈತ.
ಹಿಂದೂವಾಗಿ ಹುಟ್ಟಿದ್ದೀನಿ. ಆದರೆ ಹಿಂದೂವಾಗಿ ಸಾಯುವುದಿಲ್ಲ ಎನ್ನುವಾಗ ಅವರ ಎದುರಿಗೆ ಜಗತ್ತಿನ ಹಲವಾರು ಧರ್ಮದವರು ತಮ್ಮ ಧರ್ಮಕ್ಕೆ ಸೇರಿಕೊಳ್ಳಲು ಆಹ್ವಾನ ನೀಡಿದರೂ ಅವರು ಆರಿಸಿಕೊಂಡದ್ದು ಇದೇ ಮಣ್ಣಿನಲ್ಲಿ ಜನಿಸಿದ ಧರ್ಮವಾಗಿರಬೇಕೆಂದು ನಿರ್ಧರಿಸಿ ಭಾರತದ ನೆಲದಲ್ಲಿ ಜನಿಸಿದ ‘ಬೌದ್ಧ ಧರ್ಮ’ವನ್ನು ಸ್ವೀಕರಿಸಿದರು. ಇವರ ಜೊತೆಗೆ ಹಲವರು ಇವರ ಹಾದಿಯಲ್ಲೇ ಸಾಗಿದರು. ಹಲವು ವಿಷಯಗಳ ಬಗ್ಗೆ ತಮ್ಮ ಅನುಭವದ ಮೂಲಕ, ಜ್ಞಾನವನ್ನು ಪಸರಿಸಲು ಹೀಗೆ ಹಲವು ಪುಸ್ತಕಗಳನ್ನು ರಚಿಸಿ ಬರವಣಿಗೆಯ ಮೂಲಕ, ಸಂವಿಧಾನದ ಮೂಲಕ, ಸಿದ್ದಾಂತದ ಮೂಲಕ ಇಂದಿಗೂ ಅಂಬೇಡ್ಕರ್ ಜೀವಂತ.
ಇಂದಿನ ಮಕ್ಕಳಿಗೆ, ಯುವ ಜನತೆಗೆ ಅರ್ಥವಾಗುವಂತೆ ಅಂಬೇಡ್ಕರ್ ಅವರ ಜೀವನದ ಬಗ್ಗೆ ತಿಳಿಸುವ ಪ್ರಯತ್ನವಾಗಬೇಕಿದೆ. ಅವರ ಸಂದೇಶಗಳನ್ನು ಸುಲಭವಾಗಿ ವರ್ಗಾವಣೆ ಮಾಡಬೇಕಿದೆ. ಅಂಬೇಡ್ಕರ್ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವುದರ ಮೂಲಕ ಓದು, ಜ್ಞಾನದ ವಿಸ್ತರಣೆ ಆಗಬೇಕಿದೆ. ಆದರೆ ದುರಾದೃಷ್ಟವಶಾತ್ ಅಂಬೇಡ್ಕರ್ ಅವರ ಹೆಸರು ರಸ್ತೆಗೆ, ಕಟ್ಟಡಕ್ಕೆ, ಹೋರಾಟಕ್ಕೆ ಮಾತ್ರ ಸೀಮಿತವಾಗಿದೆ. ಅಂಬೇಡ್ಕರ್ ಅವರೊಂದಿಗೆ ಅವರ ಸಿದ್ದಾಂತಗಳು, ಆದರ್ಶಗಳು ಆಚರಣೆಗೆ ಬರಬೇಕಿದೆ. ಪ್ರಶ್ನಿಸುವ ಗುಣ, ಓದುವ ಆಸಕ್ತಿ, ಜ್ಞಾನದ ವಿಸ್ತರಣೆ, ಎಲ್ಲರನ್ನು ಒಳಗೊಳ್ಳುವ, ಸದೃಢ ಸಮಾಜವನ್ನು ಕಟ್ಟುವ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವುದರ ಮೂಲಕವೂ ದೇಶದ ಅಭಿವೃದ್ದಿಗೆ ಕಾರಣರಾಗೋಣ. ಅಂಬೇಡ್ಕರ್ ಜಯಂತಿ ಒಂದು ದಿನಕ್ಕೆ ಸೀಮಿತವಾಗದೇ ನಿತ್ಯನೂತನವಾಗಲಿ, ಸಮಾನತೆಯ ಸಿದ್ದಾಂತ ಸದಾ ಹಸಿರಾಗಿರಲಿ…

✍️ ಬರಹ: ಚೇತನ್ ಸಿ ರಾಯನಹಳ್ಳಿ
ಗ್ರಂಥಪಾಲಕರು
ಎಸ್.ಆರ್.ಎಸ್. ಸಮೂಹ ಶಿಕ್ಷಣ ಸಂಸ್ಥೆಗಳು
ಚಿತ್ರದುರ್ಗ