​ರಾಜ್ಯದ ಹಿರಿಯ ನಾಯಕ, ಸಚಿವ ಡಿ. ಸುಧಾಕರ್ ನಿಧನ: ಚಿತ್ರದುರ್ಗದಲ್ಲಿ ಮಡುಗಟ್ಟಿದ ಶೋಕ

ಚಿತ್ರದುರ್ಗ May 10: ರಾಜ್ಯ ರಾಜಕಾರಣದ ಪ್ರಭಾವಿ ನಾಯಕ, ಹಿರಿಯ ಶಾಸಕ ಹಾಗೂ ಹಾಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ (65) ಅವರು ಭಾನುವಾರ ಮುಂಜಾನೆ ವಿಧಿವಶರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 3:15ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ದೃಢಪಡಿಸಿವೆ.

​ಅನಾರೋಗ್ಯದ ಹಿನ್ನೆಲೆ

​ಇತ್ತೀಚೆಗಷ್ಟೇ ಸಚಿವ ಡಿ. ಸುಧಾಕರ್ ಅವರು ತಮ್ಮ ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಮುಗಿದ ಬಳಿಕ ಅವರಿಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ (ICU) ವೈದ್ಯರ ನಿರಂತರ ಕಣ್ಗಾವಲಿನಲ್ಲಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಇಂದು ಮುಂಜಾನೆ ಅವರು ಇಹಲೋಕ ತ್ಯಜಿಸಿದ್ದಾರೆ.

​ಸರಳ ವ್ಯಕ್ತಿತ್ವದ ರಾಜಕೀಯ ಚತುರ

​ಮಾರ್ಚ್ 28, 1961 ರಂದು ಎನ್. ದಶರಥಯ್ಯ ಮತ್ತು ಕಾಂಚನಮಾಲಮ್ಮ ದಂಪತಿಯ ಪುತ್ರನಾಗಿ ಜನಿಸಿದ ಸುಧಾಕರ್ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಪೂರ್ಣಗೊಳಿಸಿದರು. ತದನಂತರ ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಮುಗಿಸಿದರು.

​ಆರಂಭದಲ್ಲಿ ಕೃಷಿ ಹಾಗೂ ಕೌಟುಂಬಿಕ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು, ಮಾಜಿ ಶಾಸಕ ಎನ್. ಜಯಣ್ಣ ಅವರ ಮಾರ್ಗದರ್ಶನದಲ್ಲಿ ರಾಜಕೀಯದ ಅಖಾಡಕ್ಕೆ ಇಳಿದರು. ತಮ್ಮದೇ ಆದ ಸಂಘಟನಾ ಚಾತುರ್ಯದಿಂದ ಹಂತ ಹಂತವಾಗಿ ಬೆಳೆದ ಡಿ. ಸುಧಾಕರ್, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಚಿತ್ರದುರ್ಗ ಜಿಲ್ಲೆಯ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

​ಕಂಬನಿ ಮಿಡಿದ ಕರುನಾಡು

​ಸರಳ, ಸಜ್ಜನಿಕೆಯ ನಾಯಕರಾಗಿದ್ದ ಸಚಿವ ಡಿ. ಸುಧಾಕರ್ ಅವರು ಪತ್ನಿ ಹರ್ಷಿಣಿ, ಪುತ್ರ ಸುಹಾಸ್, ಪುತ್ರಿ ಸ್ಫೂರ್ತಿ ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಸಚಿವರ ಅಕಾಲಿಕ ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಗಣ್ಯರು, ಸಚಿವರು ಹಾಗೂ ಶಾಸಕರು ತೀವ್ರ ಸಂತಾಪ ಸೂಚಿಸಿದ್ದಾರೆ. ಅವರ ಅಗಲಿಕೆಯಿಂದ ತವರು ಜಿಲ್ಲೆ ಚಿತ್ರದುರ್ಗ ಸೇರಿದಂತೆ ರಾಜ್ಯದಾದ್ಯಂತ ಶೋಕದ ಛಾಯೆ ಆವರಿಸಿದೆ.

Leave a Reply

Your email address will not be published. Required fields are marked *