IPL 2026: ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್‌ಗೆ 77 ರನ್‌ಗಳ ಭರ್ಜರಿ ಜಯ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ

​ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯ 52ನೇ ರೋಚಕ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಗ್ಗುಬಡಿಯುವಲ್ಲಿ ಗುಜರಾತ್ ಟೈಟಾನ್ಸ್ ಯಶಸ್ವಿಯಾಗಿದೆ. ಬೃಹತ್ ಮೊತ್ತ ಕಲೆಹಾಕಿದ ಗುಜರಾತ್ ತಂಡವು 77 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

​ಈ ಲೀಗ್‌ನ 7ನೇ ಗೆಲುವಿನೊಂದಿಗೆ 14 ಅಂಕಗಳನ್ನು ಸಂಪಾದಿಸಿರುವ ಗುಜರಾತ್ ಟೈಟಾನ್ಸ್, ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಜಿಗಿದಿದೆ. ಮತ್ತೊಂದೆಡೆ, ಸತತ ವೈಫಲ್ಯ ಅನುಭವಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ತನ್ನ 5ನೇ ಸೋಲಿನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನಕ್ಕೆ ಕುಸಿತ ಕಂಡಿದೆ.

​ಗುಜರಾತ್ ಟೈಟಾನ್ಸ್‌ಗೆ ಸ್ಫೋಟಕ ಆರಂಭ

​ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ಟೈಟಾನ್ಸ್, ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ರಾಜಸ್ಥಾನ್ ಬೌಲರ್‌ಗಳನ್ನು ಬೆಂಡೆತ್ತಿದರು. ಈ ಜೋಡಿ ಮೊದಲ ವಿಕೆಟ್‌ಗೆ 118 ರನ್‌ಗಳ ಭದ್ರ ಪಾಲುದಾರಿಕೆ ಒದಗಿಸಿತು. ಶುಭಮನ್ ಗಿಲ್ ಕೇವಲ 44 ಎಸೆತಗಳಲ್ಲಿ 84 ರನ್ ಸಿಡಿಸಿ ಅಬ್ಬರಿಸಿದರೆ, ಸಾಯಿ ಸುದರ್ಶನ್ 36 ಎಸೆತಗಳಲ್ಲಿ 55 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದರು.

​ಮಧ್ಯಮ ಕ್ರಮಾಂಕದಲ್ಲಿ ಬಂದ ಜೋಸ್ ಬಟ್ಲರ್ (10 ಎಸೆತಗಳಲ್ಲಿ 13 ರನ್) ನಿರಾಸೆ ಮೂಡಿಸಿದರೂ, ಅಂತಿಮ ಓವರ್‌ಗಳಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ರಾಹುಲ್ ತೆವಾಟಿಯಾ ಆರ್ಭಟಿಸಿದರು. ವಾಷಿಂಗ್ಟನ್ ಸುಂದರ್ 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 37 ರನ್ ಚಚ್ಚಿದರೆ, ತೆವಾಟಿಯಾ ಕೇವಲ 4 ಎಸೆತಗಳಲ್ಲಿ 14 ರನ್ ಸಿಡಿಸಿದರು. ಪರಿಣಾಮ ಗುಜರಾತ್ ತಂಡ 229 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ರಾಜಸ್ಥಾನ್ ಪರ ಬ್ರಿಜೇಶ್ ಶರ್ಮಾ 2 ವಿಕೆಟ್ ಕಿತ್ತರೆ, ರವೀಂದ್ರ ಜಡೇಜಾ ಮತ್ತು ಯಶ್ ರಾಜ್ ಪುಂಜಾ ತಲಾ 1 ವಿಕೆಟ್ ಪಡೆದರು.

​ರಾಜಸ್ಥಾನ್ ರಾಯಲ್ಸ್ ದಿಢೀರ್ ಕುಸಿತ

​230 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಸ್ಪೋಟಕ ಆರಂಭ ಒದಗಿಸಿದರು. ಕೇವಲ 16 ಎಸೆತಗಳಲ್ಲಿ 36 ರನ್ ಬಾರಿಸಿ ಅಪಾಯಕಾರಿಯಾಗುತ್ತಿದ್ದ ಇವರ ಓಟಕ್ಕೆ ಮೊಹಮ್ಮದ್ ಸಿರಾಜ್ ಬ್ರೇಕ್ ಹಾಕಿದರು. ವೈಭವ್ ವಿಕೆಟ್ ಪತನದ ಬಳಿಕ ರಾಜಸ್ಥಾನ್ ತಂಡದ ಬ್ಯಾಟಿಂಗ್ ಲೈನ್‌ಅಪ್ ಇಸ್ಪೀಟ್ ಎಲೆಯಂತೆ ಕುಸಿಯಿತು.

​ನಾಯಕ ಯಶಸ್ವಿ ಜೈಸ್ವಾಲ್ ಕೇವಲ 3 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಧ್ರುವ್ ಜುರೇಲ್ (24 ರನ್), ಶಿಮ್ರಾನ್ ಹೆಟ್ಮಾಯರ್ (6 ರನ್), ಡೊನೊವನ್ ಫೆರೆರಾ (4 ರನ್) ಹಾಗೂ ಶುಭಂ ದುಬೆ (15 ರನ್) ಅಲ್ಪ ಮೊತ್ತಕ್ಕೆ ಔಟಾಗುವ ಮೂಲಕ ತಂಡಕ್ಕೆ ಆಸರೆಯಾಗಲು ವಿಫಲರಾದರು. ನಿರಂತರವಾಗಿ ವಿಕೆಟ್ ಕಳೆದುಕೊಂಡ ರಾಜಸ್ಥಾನ್ ಅಂತಿಮವಾಗಿ 152 ರನ್‌ಗಳಿಗೆ ಆಲೌಟ್ ಆಗಿ, 77 ರನ್‌ಗಳ ಹೀನಾಯ ಸೋಲಿಗೆ ಶರಣಾಯಿತು.

Leave a Reply

Your email address will not be published. Required fields are marked *