ನದಿಯಲ್ಲಿ ಕೊಚ್ಚಿಬಂದ ಸಿಲಿಂಡರ್ ಬಳಸಬೇಡಿ, ತಕ್ಷಣ ಅಧಿಕಾರಿಗಳಿಗೆ ಒಪ್ಪಿಸಿ: ರಾಯಗಢ ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶ
ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಖಲಾಪುರ ತಾಲೂಕಿನ ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಘಟಕಕ್ಕೆ ಪ್ರವಾಹದ ನೀರು ನುಗ್ಗಿದ್ದು, ಬರೋಬ್ಬರಿ 3,000 ಎಲ್‌ಪಿಜಿ ಸಿಲಿಂಡರ್‌ಗಳು ಪಾತಾಳಗಂಗಾ ನದಿಯಲ್ಲಿ ಕೊಚ್ಚಿಹೋಗಿವೆ.
ನದಿಯಲ್ಲಿ ತೇಲುತ್ತಿರುವ ಸಿಲಿಂಡರ್‌ಗಳು, ಮುಗಿಬಿದ್ದ ಜನ! ಖಲಾಪುರದ ಎಂಐಡಿಸಿ ಕೈಗಾರಿಕಾ ಪ್ರದೇಶದಲ್ಲಿರುವ ಹೆಚ್‌ಪಿಸಿಎಲ್ ಪ್ಲಾಂಟ್‌ನಲ್ಲಿ ಈ ಘಟನೆ ಸಂಭವಿಸಿದೆ. ಮಳೆಯ ಅಬ್ಬರಕ್ಕೆ ಸಿಲಿಂಡರ್ ಸಂಗ್ರಹಣಾ ಕೇಂದ್ರ ಜಲಾವೃತವಾಗಿದ್ದು, ಸಾವಿರಾರು ಸಿಲಿಂಡರ್‌ಗಳು ನದಿಯಲ್ಲಿ ತೇಲುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೇ ವೇಳೆ, ನದಿಯಲ್ಲಿ ಸಿಲಿಂಡರ್‌ಗಳು ತೇಲಿ ಬರುತ್ತಿರುವುದನ್ನು ಕಂಡ ನದಿ ಪಾತ್ರದ ಗ್ರಾಮಸ್ಥರು, ಪ್ರಾಣಾಪಾಯವನ್ನು ಲೆಕ್ಕಿಸದೆ ಅವುಗಳನ್ನು ಹಿಡಿದು ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಿರುವುದು ಅಧಿಕಾರಿಗಳ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾಧಿಕಾರಿಗಳಿಂದ ತುರ್ತು ಎಚ್ಚರಿಕೆ: ಸ್ಫೋಟದ ಭೀತಿ ಪರಿಸ್ಥಿತಿಯ ಗಂಭೀರತೆ ಅರಿತಿರುವ ರಾಯಗಢ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ. “ನದಿಯಲ್ಲಿ ಸಿಕ್ಕ ಸಿಲಿಂಡರ್‌ಗಳನ್ನು ಯಾವುದೇ ಕಾರಣಕ್ಕೂ ವೈಯಕ್ತಿಕ ಬಳಕೆಗೆ ಮನೆಗೆ ತೆಗೆದುಕೊಂಡು ಹೋಗಬಾರದು ಅಥವಾ ತೆರೆಯಲು ಪ್ರಯತ್ನಿಸಬಾರದು. ನೀರಿನ ರಭಸಕ್ಕೆ ಅವುಗಳ ವಾಲ್ವ್‌ಗಳು ಹಾನಿಗೀಡಾಗಿರುವ ಸಾಧ್ಯತೆಯಿದ್ದು, ಅನಿಲ ಸೋರಿಕೆಯಿಂದ ಭಾರಿ ಸ್ಫೋಟ ಸಂಭವಿಸುವ ಅಪಾಯವಿದೆ” ಎಂದು ಎಚ್ಚರಿಸಿದ್ದಾರೆ. ಕೊಚ್ಚಿಬಂದಿರುವ ಸಿಲಿಂಡರ್‌ಗಳು ಖಾಲಿ ಇವೆಯೋ ಅಥವಾ ಭರ್ತಿಯಾಗಿವೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕೂಡಲೇ ಅಧಿಕಾರಿಗಳಿಗೆ ಒಪ್ಪಿಸಲು ಸೂಚನೆ ಯಾರಿಗಾದರೂ ನದಿ ದಡದಲ್ಲಿ ಗ್ಯಾಸ್ ಸಿಲಿಂಡರ್‌ಗಳು ಸಿಕ್ಕರೆ ತಕ್ಷಣವೇ ಹತ್ತಿರದ ತಹಶೀಲ್ದಾರ್ ಕಚೇರಿ, ಸ್ಥಳೀಯ ಆಡಳಿತ ಅಥವಾ ಗ್ಯಾಸ್ ಏಜೆನ್ಸಿಗಳಿಗೆ ಒಪ್ಪಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಜೀವಹಾನಿ ತಪ್ಪಿಸಲು ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಕಾರ್ಯಾಚರಣೆ ಚುರುಕು ರೈಲ್ವೆ ಹಳಿ ಹಾಗೂ ಕೈಗಾರಿಕಾ ಪ್ರದೇಶಗಳ ಬಳಿ ಹಾದುಹೋಗುವ ಪಾತಾಳಗಂಗಾ ನದಿ ಪ್ರಸ್ತುತ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಹೆಚ್‌ಪಿಸಿಎಲ್ ತಜ್ಞರು ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ದೋಣಿಗಳ ಮೂಲಕ ನದಿಯಲ್ಲಿ ತೇಲುತ್ತಿರುವ ಸಿಲಿಂಡರ್‌ಗಳನ್ನು ಮರಳಿ ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.