ರೈತ ಸಂಘದ ಆರೋಪಗಳು ಆಧಾರರಹಿತ: ಅಕ್ರಮ ಅಡಿಕೆ ದಂಧೆ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ – ಕಾರೇಹಳ್ಳಿ ಉಲ್ಲಾಸ್

ಚಿತ್ರದುರ್ಗ ಜು. 9

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ತಮ್ಮ ಮೇಲೆ ರೈತ ಸಂಘ ಮಾಡಿರುವ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾದವು ಹಾಗೂ ಆಧಾರರಹಿತವಾದವು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಸ್ಪಷ್ಟಪಡಿಸಿದ್ದಾರೆ.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ರೈತರ ವಿರುದ್ಧವಿಲ್ಲ, ಬದಲಾಗಿ ರೈತರಿಗೆ ಮಾರಕವಾಗಿರುವ ಅಕ್ರಮ ಅಡಿಕೆ ದಂಧೆಯ ವಿರುದ್ಧ ಹೋರಾಡುತ್ತಿರುವುದಾಗಿ ತಿಳಿಸಿದರು. ಜೂನ್ 26ರಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ ಅವರು ಮಾಡಿದ ಆರೋಪಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಕಳಪೆ ಅಡಿಕೆ ದಂಧೆ ಮತ್ತು ತೆರಿಗೆ ವಂಚನೆ ಕೆಲವು ವರ್ತಕರು ಇಂಡೋನೇಷಿಯಾ, ಬರ್ಮಾ ಹಾಗೂ ಮಿಜೋರಾಂನಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ತರಿಸಿ, ಅದಕ್ಕೆ ವಿಷಪೂರಿತ ರೆಡ್ ಆಕ್ಸೈಡ್ ಬೆರೆಸಿ ಸ್ಥಳೀಯ ಉತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಮಿಶ್ರಣ ಮಾಡುತ್ತಿದ್ದಾರೆ. ಈ ಕಲಬೆರಕೆ ಅಡಿಕೆಯನ್ನು ಉತ್ತರ ಭಾರತದ ಕಂಪನಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ನಮ್ಮ ಜಿಲ್ಲೆಯ ನೈಜ ಅಡಿಕೆಯ ಬೆಲೆ ಕುಸಿಯುತ್ತಿದ್ದು, ರೈತರಿಗೆ ಭಾರಿ ಅನ್ಯಾಯವಾಗುತ್ತಿದೆ. ಇದಲ್ಲದೆ, ಶೇ. 5ರಷ್ಟು ಜಿಎಸ್‌ಟಿ ಹಾಗೂ ಶೇ. 15ರಷ್ಟು ಎಪಿಎಂಸಿ ತೆರಿಗೆಯನ್ನು ವಂಚಿಸಿ ಟ್ರಾನ್ಸ್‌ಪೋರ್ಟ್ ಕಂಪನಿಗಳ ಮೂಲಕ ಅಕ್ರಮ ಸಾಗಾಟ ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆದರಿಕೆ ಮತ್ತು ಕಾನೂನು ಹೋರಾಟ ಜೂನ್ 24ರಂದು ಅಕ್ರಮ ಅಡಿಕೆ ಸಾಗಿಸುತ್ತಿದ್ದ ಲಾರಿಯ ಬಗ್ಗೆ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅದನ್ನು ಜಪ್ತಿ ಮಾಡಿಸಿದ ಬಳಿಕ ತಮಗೆ ನಿರಂತರವಾಗಿ ಜೀವಬೆದರಿಕೆ ಕರೆಗಳು ಬರುತ್ತಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಇದರ ಬೆನ್ನಲ್ಲೇ ತಮ್ಮ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಳ್ಳು ಎಫ್‌ಐಆರ್ ದಾಖಲಿಸಲಾಗಿದ್ದು, ಈಗಾಗಲೇ ಕರ್ನಾಟಕ ಹೈಕೋರ್ಟ್‌ನಿಂದ ಅದಕ್ಕೆ ತಡೆಯಾಜ್ಞೆ ತಂದಿರುವುದಾಗಿ ಉಲ್ಲಾಸ್ ವಿವರಿಸಿದರು.

ಮುಂದಿನ ನಡೆ ತಮ್ಮ ವಿರುದ್ಧ ಸುಳ್ಳು ಆರೋಪ ಹಾಗೂ ಪ್ರತಿಭಟನೆ ಮಾಡಿದವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಅಕ್ರಮ ವಿದೇಶಿ ಅಡಿಕೆ ಹಾವಳಿಯನ್ನು ತಡೆದು, ಜಿಲ್ಲೆಯ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ಅವರು ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹನೀಫ್ ಉಪಸ್ಥಿತರಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *