ಚಂದ್ರನಿಗೆ ಅಪ್ಪಳಿಸಲಿರುವ ‘ಡೆಡ್’ ಸ್ಪೇಸ್‌ಎಕ್ಸ್ ರಾಕೆಟ್: ಕುತೂಹಲ ಕೆರಳಿಸಿದ ವಿದ್ಯಮಾನ
ಬಾಹ್ಯಾಕಾಶಕ್ಕೆ ಉಡಾವಣೆಯಾಗುವ ಎಲ್ಲಾ ರಾಕೆಟ್‌ಗಳು ಅಥವಾ ಅದರ ಭಾಗಗಳು ಸುರಕ್ಷಿತವಾಗಿ ಮರಳುವುದಿಲ್ಲ ಎಂಬುದಕ್ಕೆ ಬುಧವಾರ (ಆಗಸ್ಟ್ 5) ನಡೆಯಲಿರುವ ವಿದ್ಯಮಾನವೊಂದು ತಾಜಾ ಉದಾಹರಣೆಯಾಗಿದೆ. 2025ರಲ್ಲಿ ಉಡಾವಣೆಗೊಂಡಿದ್ದ ಸ್ಪೇಸ್‌ಎಕ್ಸ್ (SpaceX) ರಾಕೆಟ್‌ನ ಮೇಲ್ಭಾಗವು (Upper stage) ಇದೀಗ ನಿಯಂತ್ರಣ ಕಳೆದುಕೊಂಡಿದ್ದು, ಚಂದ್ರನ ಮೇಲ್ಮೈಗೆ ಅಪ್ಪಳಿಸಲು ಸಜ್ಜಾಗಿದೆ. ಇದು ಮೊದಲೇ ನಿರ್ಧರಿಸಿದ ಕಾರ್ಯಾಚರಣೆಯಲ್ಲದಿದ್ದರೂ, ವಿಜ್ಞಾನಿಗಳಲ್ಲಿ ಕುತೂಹಲ ಹಾಗೂ ಬಾಹ್ಯಾಕಾಶ ತ್ಯಾಜ್ಯದ (Space Debris) ಬಗ್ಗೆ ಆತಂಕವನ್ನು ಮೂಡಿಸಿದೆ.
ರಾಕೆಟ್ ಪಥ ಬದಲಾಗಿದ್ದೇಗೆ? 2025ರ ಜನವರಿ 15ರಂದು, ಫೈರ್‌ಫ್ಲೈ ಏರೋಸ್ಪೇಸ್‌ನ ‘ಬ್ಲೂ ಘೋಸ್ಟ್ ಲ್ಯಾಂಡರ್’ (ಯಶಸ್ವಿ) ಮತ್ತು ಜಪಾನ್‌ನ ಐ-ಸ್ಪೇಸ್ (iSpace) ಲ್ಯಾಂಡರ್‌ಗಳನ್ನು (ವಿಫಲ) ಹೊತ್ತು ಈ ರಾಕೆಟ್ ನಭಕ್ಕೆ ಚಿಮ್ಮಿತ್ತು. ಮಿಷನ್ ಮುಗಿದ ಬಳಿಕ ಈ ರಾಕೆಟ್‌ನ ಭಾಗವನ್ನು ಸುರಕ್ಷಿತ ಕಕ್ಷೆಗೆ (Safe orbit) ಅಥವಾ ಸೂರ್ಯನ ಕಕ್ಷೆಗೆ ಸೇರಿಸಬೇಕಿತ್ತು. ಆದರೆ, ಹಾಗಾಗದ ಕಾರಣ ಕಳೆದ ಒಂದೂವರೆ ವರ್ಷದಿಂದ ಬಾಹ್ಯಾಕಾಶದಲ್ಲಿ ಅನಾಥವಾಗಿ ಸುತ್ತುತ್ತಿದ್ದ ಈ ತ್ಯಾಜ್ಯ, ಇದೀಗ ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ ಐನ್‌ಸ್ಟೈನ್ ಕ್ರೇಟರ್ (Einstein Crater) ಬಳಿ ಅಪ್ಪಳಿಸುತ್ತಿದೆ.
ಡಿಕ್ಕಿಯ ತೀವ್ರತೆ ಮತ್ತು ಭಾರಿ ಸ್ಫೋಟ ಬಾಹ್ಯಾಕಾಶ ಟ್ರ್ಯಾಕಿಂಗ್ ತಜ್ಞ ಬಿಲ್ ಗ್ರೇ ಅವರ ಮಾಹಿತಿಯಂತೆ, ಈ ಡೆಡ್ ರಾಕೆಟ್ ಗಂಟೆಗೆ ಸುಮಾರು 8,700 ಕಿ.ಮೀ. (5,400 ಮೈಲು) ರಭಸದಲ್ಲಿ ಚಂದ್ರನಿಗೆ ಡಿಕ್ಕಿ ಹೊಡೆಯಲಿದೆ. ಇದರಿಂದ ಉಂಟಾಗುವ ಸ್ಫೋಟದ ತೀವ್ರತೆಯು 3 ಟನ್ ಟಿಎನ್‌ಟಿ (TNT) ಸ್ಫೋಟಕ್ಕೆ ಸಮನಾಗಿರಲಿದೆ ಎಂದು ಅಂದಾಜಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಚಂದ್ರನ ಅಂಗಳದಲ್ಲಿ ಸುಮಾರು 27 ಮೀಟರ್ ಅಗಲ ಹಾಗೂ 5 ಮೀಟರ್ ಆಳದ ಬೃಹತ್ ಕುಳಿ ನಿರ್ಮಾಣವಾಗುವ ಸಾಧ್ಯತೆಯಿದೆ.
ಭೂಮಿಯಿಂದ ನೋಡಬಹುದೇ? ಡಿಕ್ಕಿಯಾದಾಗ ಹೊಮ್ಮುವ ಬೆಳಕು ಕೇವಲ ಒಂದು ಸೆಕೆಂಡ್‌ಗಿಂತ ಕಡಿಮೆ ಇರುವುದರಿಂದ ಬರಿಗಣ್ಣಿಗೆ ಕಾಣಿಸುವುದಿಲ್ಲ. ಆದರೆ, ಅಮೆರಿಕದ ಪೂರ್ವ ಭಾಗ, ಕೆನಡಾ ಮತ್ತು ದಕ್ಷಿಣ ಅಮೆರಿಕದ ಭಾಗಗಳಿಂದ ಶಕ್ತಿಶಾಲಿ ಟೆಲಿಸ್ಕೋಪ್‌ಗಳ ಮೂಲಕ, ಡಿಕ್ಕಿಯ ಬಳಿಕ ಮೇಲೇಳುವ ದೂಳು ಮತ್ತು ಕಸದ ಮೋಡವನ್ನು ಕೆಲವು ನಿಮಿಷಗಳ ಕಾಲ ವೀಕ್ಷಿಸಲು ಸಾಧ್ಯವಿದೆ.
ವಿಜ್ಞಾನಿಗಳ ಕಳವಳವೇನು? ಲಾಸ್ ಅಲಾಮೋಸ್ ನ್ಯಾಷನಲ್ ಲ್ಯಾಬೋರೇಟರಿಯ ವಿಜ್ಞಾನಿ ಬೆಂಜಮಿನ್ ಫರ್ನಾಂಡೊ ಅವರ ಪ್ರಕಾರ, ಈ ಡಿಕ್ಕಿಯಿಂದ ತಕ್ಷಣದ ಅಪಾಯವೇನೂ ಇಲ್ಲ. ಆದರೆ, “ಮುಂದಿನ ದಿನಗಳಲ್ಲಿ ಮಾನವನು ಚಂದ್ರನ ಮೇಲೆ ಶಾಶ್ವತ ನೆಲೆಗಳನ್ನು ಸ್ಥಾಪಿಸುವಾಗ ಇಂತಹ ಅನಿಯಂತ್ರಿತ ಬಾಹ್ಯಾಕಾಶ ತ್ಯಾಜ್ಯಗಳು ಗಗನಯಾತ್ರಿಗಳಿಗೆ ಮಾರಕವಾಗಬಹುದು” ಎಂದು ಎಚ್ಚರಿಸಿದ್ದಾರೆ. ಈ ಢಿಕ್ಕಿಯ ಕುರಿತು ಅಧ್ಯಯನ ನಡೆಸಲು ನಾಸಾದ ಎಲ್‌ಆರ್‌ಒ (LRO) ಮತ್ತು ದಕ್ಷಿಣ ಕೊರಿಯಾದ ದನೂರಿ (Danuri) ಉಪಗ್ರಹಗಳು ಸ್ಫೋಟದ ಮುನ್ನ ಹಾಗೂ ನಂತರದ ಚಿತ್ರಗಳನ್ನು ಸೆರೆಹಿಡಿದು ಒದಗಿಸಲಿವೆ.
ಇದು ಎರಡನೇ ಆಕಸ್ಮಿಕ ಘಟನೆ ಮಾನವ ನಿರ್ಮಿತ ಬಾಹ್ಯಾಕಾಶ ತ್ಯಾಜ್ಯವೊಂದು ಆಕಸ್ಮಿಕವಾಗಿ ಚಂದ್ರನಿಗೆ ಅಪ್ಪಳಿಸುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2022ರಲ್ಲಿ ಚೀನಾದ ಡೆಡ್ ರಾಕೆಟ್ ಭಾಗವೊಂದು ಚಂದ್ರನ ಹಿಂಭಾಗಕ್ಕೆ ಅಪ್ಪಳಿಸಿ ಎರಡು ಕುಳಿಗಳನ್ನು ಸೃಷ್ಟಿಸಿತ್ತು. (ಹಿಂದೆ ಅಪೋಲೋ ಮಿಷನ್ ವೇಳೆ ಚಂದ್ರನ ಕಂಪನಗಳನ್ನು ಅಳೆಯಲು ನಾಸಾ ಉದ್ದೇಶಪೂರ್ವಕವಾಗಿ ರಾಕೆಟ್‌ಗಳನ್ನು ಡಿಕ್ಕಿ ಹೊಡೆಸಿತ್ತು).