ಪೌರಕಾರ್ಮಿಕರನ್ನು ಅವಮಾನಿಸಿದ ಸಚಿವ ಕೃಷ್ಣ ಬೈರೇಗೌಡ ಕ್ಷಮೆಯಾಚಿಸದಿದ್ದರೆ ಕಪ್ಪು ಬಟ್ಟೆ ಪ್ರದರ್ಶನ: ಜಿ.ಹೆಚ್. ಮೋಹನ್ ಕುಮಾರ್ ಎಚ್ಚರಿಕೆ

ಚಿತ್ರದುರ್ಗ: ಮ್ಯಾನ್‍ಹೋಲ್ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆಯನ್ನು ಸಂಪೂರ್ಣ ಯಾಂತ್ರೀಕರಣಗೊಳಿಸಬೇಕು ಹಾಗೂ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಮನವಿ ಮಾಡಲು ಬಂದ ಪೌರಕಾರ್ಮಿಕರನ್ನು ಅವಮಾನಿಸಿರುವ ಸಚಿವ ಕೃಷ್ಣ ಬೈರೇಗೌಡರ ನಡೆಯು ಅತ್ಯಂತ ಖಂಡನೀಯ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಹೆಚ್. ಮೋಹನ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಷ್ಟಗಳನ್ನು ಹೇಳಿಕೊಳ್ಳಲು ಬಂದ ಕಾರ್ಮಿಕರನ್ನು ಕುರಿತು, “ನೀವು ಶೇಕಡ 30 ರಷ್ಟು ಗೈರುಹಾಜರಾಗುತ್ತೀರಿ, ನಿಮ್ಮನ್ನು ಯಾಕೆ ಖಾಯಂ ಮಾಡಬೇಕು?” ಎಂದು ಸಚಿವರು ಪ್ರಶ್ನಿಸಿರುವುದು ಅವರ ಅಧಿಕಾರದ ದರ್ಪವನ್ನು ತೋರಿಸುತ್ತದೆ. ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಬೇಕಾದವರೇ ಈ ರೀತಿ ಮಾತನಾಡಿರುವುದು ಶ್ರಮಿಕ ವರ್ಗಕ್ಕೆ ಮಾಡಿದ ಘೋರ ಅಪಮಾನವಾಗಿದೆ ಎಂದು ಅವರು ದೂರಿದ್ದಾರೆ.

ನಗರಗಳನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರು ಕೇವಲ ಕಸ ಎತ್ತುವ ಕಾರ್ಮಿಕರಲ್ಲ, ಅವರು ಸಾರ್ವಜನಿಕ ಆರೋಗ್ಯದ ಮುಂಚೂಣಿ ಸೇವಕರು. ಆದರೆ, ಗುತ್ತಿಗೆ ಪದ್ಧತಿ, ವೇತನ ವಿಳಂಬ ಮತ್ತು ಸಾಮಾಜಿಕ ಭದ್ರತೆಯ ಕೊರತೆಯಿಂದ ಅವರು ಇಂದಿಗೂ ನರಳುತ್ತಿದ್ದಾರೆ. ಪ್ರತಿದಿನ ಕಸ, ಧೂಳು, ವಿಷಕಾರಿ ತ್ಯಾಜ್ಯ ಹಾಗೂ ಒಳಚರಂಡಿ ಪರಿಸರದಲ್ಲಿ ದುಡಿಯುವ ಅವರಿಗೆ ಗುಣಮಟ್ಟದ ಗ್ಲೌಸ್, ಮಾಸ್ಕ್, ಗಮ್‌ಬೂಟ್, ಸುರಕ್ಷತಾ ಉಡುಪು, ವಿಮಾ ಸೌಲಭ್ಯ ಹಾಗೂ ಉಚಿತ ಆರೋಗ್ಯ ತಪಾಸಣೆ ಒದಗಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಆಗ್ರಹಿಸಿದ್ದಾರೆ.

ಮಾನವ ಜೀವವನ್ನು ಅಪಾಯಕ್ಕೆ ತಳ್ಳುವ ಮ್ಯಾನ್‍ಹೋಲ್ ಸ್ವಚ್ಛತಾ ಪದ್ಧತಿಗೆ ಸರ್ಕಾರ ಶಾಶ್ವತ ಅಂತ್ಯ ಹಾಡಬೇಕು. ಕೂಡಲೇ ಸಚಿವ ಕೃಷ್ಣ ಬೈರೇಗೌಡರು ತಮ್ಮ ಹೇಳಿಕೆಯನ್ನು ಹಿಂಪಡೆದು ಪೌರಕಾರ್ಮಿಕರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು. ಜೊತೆಗೆ ಕಾರ್ಮಿಕರ ಉದ್ಯೋಗವನ್ನು ಖಾಯಂಗೊಳಿಸಿ, ಸಮಯಕ್ಕೆ ಸರಿಯಾಗಿ ವೇತನ, ಪಿಎಫ್ ಮತ್ತು ಇಎಸ್‌ಐ ಸೌಲಭ್ಯಗಳನ್ನು ಹಾಗೂ ಗೌರವಯುತ ಕೆಲಸದ ವಾತಾವರಣವನ್ನು ಖಾತ್ರಿಪಡಿಸಬೇಕು. ಒಂದು ವೇಳೆ ಸಚಿವರು ಕ್ಷಮೆಯಾಚಿಸದಿದ್ದರೆ, ಪೌರಕಾರ್ಮಿಕರ ಆತ್ಮಗೌರವದ ರಕ್ಷಣೆಗಾಗಿ ಕಪ್ಪು ಬಟ್ಟೆ ಪ್ರದರ್ಶನದ ಮೂಲಕ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಜಿ.ಹೆಚ್. ಮೋಹನ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *