ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ: ನಗರದ ಪ್ರತಿಷ್ಠಿತ ಟೌನ್ ಕೋ-ಆಪರೇಟಿವ್ ಸೊಸೈಟಿಯು 2025-26ನೇ ಆರ್ಥಿಕ ಸಾಲಿನಲ್ಲಿ ಒಟ್ಟು 22,11,733 ರೂ. ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ. ನಿಶಾನಿ ಜಯಣ್ಣ ಪ್ರಕಟಿಸಿದ್ದಾರೆ.
ಭಾನುವಾರ ನಗರದ ಶ್ರೀ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಂಘದ 109ನೇ ವಾರ್ಷಿಕ ಸಾಮಾನ್ಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 1912ರಲ್ಲಿ ಸ್ಥಾಪನೆಯಾದ ಈ ಸೊಸೈಟಿಯು ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿ ಹಾಗೂ ತರಳಬಾಳು ನಗರ, ಕವಾಡಿಗರಹಟ್ಟಿ, ಎಂ.ಕೆ.ಹಟ್ಟಿ, ಮದಕರಿಪುರ, ಮಾಳಪ್ಪನಹಟ್ಟಿ, ಪಿಳ್ಳೇಕೆರೆನಹಳ್ಳಿ, ವಿದ್ಯಾನಗರ ಮತ್ತು ಬಸವೇಶ್ವರ ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರ ನಿರಂತರ ಸಹಕಾರದಿಂದ ಪ್ರಗತಿದಾಯಕವಾಗಿ ಬೆಳೆದಿದೆ ಎಂದರು.

ಆರ್ಥಿಕ ಪ್ರಗತಿಯ ನೋಟ: ಮಾರ್ಚ್ 2026ರ ಅಂತ್ಯಕ್ಕೆ ಸಂಘವು 2,601 ಸದಸ್ಯರೊಂದಿಗೆ 66.13 ಲಕ್ಷ ರೂ. ಪಾವತಿಯಾದ ಷೇರು ಬಂಡವಾಳ ಹೊಂದಿದೆ. ಸಂಘದ ಆಪದ್ಧನ ನಿಧಿ 25.92 ಲಕ್ಷ ರೂ. ಹಾಗೂ ಇತರೆ ನಿಧಿಗಳು 80.06 ಲಕ್ಷ ರೂ. ತಲುಪಿವೆ. ಠೇವಣಿಗಳ ಪ್ರಮಾಣದಲ್ಲಿ 27.59 ಲಕ್ಷ ರೂ. ಹೆಚ್ಚಳವಾಗಿದ್ದು, ಒಟ್ಟು ಠೇವಣಿ 5.30 ಕೋಟಿ ರೂ. ಗಡಿ ದಾಟಿದೆ. ಹಿರಿಯ ನಾಗರಿಕರಿಗೆ ಠೇವಣಿಗಳ ಮೇಲೆ ಶೇ. 0.50ರಷ್ಟು ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ.
ವಿವಿಧ ಬ್ಯಾಂಕುಗಳಲ್ಲಿ 23.92 ಲಕ್ಷ ರೂ. ತೊಡಗಿಸಲಾಗಿದ್ದು, ಒಟ್ಟು 4.19 ಕೋಟಿ ರೂ. ಸಾಲ ವಿತರಣೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 1.12 ಕೋಟಿ ರೂ. ಸಾಲ ವೃದ್ಧಿಯಾಗಿದ್ದು, ಇದರಲ್ಲಿ ಸುಸ್ತಿ ಸಾಲದ ಪ್ರಮಾಣ ಕೇವಲ ಶೇ. 1.78 ರಷ್ಟಿದೆ ಎಂದು ವಿವರಿಸಿದರು. ನಿವ್ವಳ ಲಾಭವನ್ನು ಸಹಕಾರಿ ಬೈಲಾ ನಿಯಮ 87ರ ಅನ್ವಯ ವಿಲೇವಾರಿ ಮಾಡಲು ಆಡಳಿತ ಮಂಡಳಿ ಶಿಫಾರಸು ಮಾಡಿದೆ.

ಸಮುದಾಯ ಭವನ ನಿರ್ಮಾಣ ಹಾಗೂ ಷೇರು ಮೌಲ್ಯ ಹೆಚ್ಚಳ: ಮಹಾಸಭೆಯ ನಿರ್ಣಯ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಅನುಮತಿಯಂತೆ ಒಂದು ಷೇರಿನ ಬೆಲೆಯನ್ನು 5,000 ರೂ. ಗಳಿಗೆ ಹೆಚ್ಚಿಸಲಾಗಿದ್ದು, ವ್ಯತ್ಯಾಸದ ಹಣ ಪಾವತಿಸಲು 2026ರ ಡಿಸೆಂಬರ್ 31ರವರೆಗೆ ಗಡುವು ನೀಡಲಾಗಿದೆ.
ನೂತನ ಹೈಟೆಕ್ ಸಹಕಾರ ಸಮುದಾಯ ಭವನ ನಿರ್ಮಾಣಕ್ಕೆ ಡಿಸಿಸಿ ಬ್ಯಾಂಕ್‌ನಿಂದ ಈಗಾಗಲೇ 1 ಕೋಟಿ ರೂ. ಸಾಲ ಪಡೆಯಲಾಗಿದ್ದು, ಹೆಚ್ಚುವರಿ 2 ಕೋಟಿ ರೂ. ಅಗತ್ಯವಿರುವುದರಿಂದ ಮಹಾಸಭೆಯಲ್ಲಿ ಸದಸ್ಯರ ಒಪ್ಪಿಗೆ ಪಡೆಯಲಾಯಿತು. ಆದಾಯದ ದೃಷ್ಟಿಯಿಂದ ಈ ಭವನಕ್ಕೆ ಲಿಫ್ಟ್, ಸೆಂಟ್ರಲ್ ಎಸಿ ಮತ್ತು ಸೋಲಾರ್ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ಸಂಘದ ಸದಸ್ಯರು ತಮ್ಮ ಷೇರು ಡಿವಿಡೆಂಟ್ ಮೊತ್ತವನ್ನು ಈ ಭವನ ನಿರ್ಮಾಣ ಕಾಮಗಾರಿಗೆ ನೀಡಲು ಸಭೆಯಲ್ಲಿ ಒಮ್ಮತದ ಒಪ್ಪಿಗೆ ಸೂಚಿಸಿದರು.
ಕಳೆದ ಸಾಲಿನಲ್ಲಿ ಮೃತಪಟ್ಟ 19 ಸದಸ್ಯರ ಕುಟುಂಬಗಳಿಗೆ ಒಟ್ಟು 57,000 ರೂ. ಪರಿಹಾರ ಪಾವತಿಸಲಾಗಿದೆ. ಇದೇ ವೇಳೆ 75 ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರು ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಲಾಭದಾಯಕವಾಗಿ ಮುನ್ನಡೆಸುವುದು ಆಡಳಿತ ಮಂಡಳಿಯ ಗುರಿಯಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಎನ್.ಎಂ. ಪುಷ್ಪವಲ್ಲಿ, ನಿರ್ದೇಶಕರುಗಳಾದ ಸಿ.ಹೆಚ್. ಸೂರ್ಯಪ್ರಕಾಶ್, ಬಿ.ವಿ. ಶ್ರೀನಿವಾಸ್ ಮೂರ್ತಿ, ಲಿಯಾಕತ್ ಆಲಿಖಾನ್, ಸಾಧಿಕ್ ಭಾಷಾ, ಜಿ. ಸುರೇಶ್ ಕುಮಾರ್ ಭಾಫ್ನಾ, ಜೆ.ಆರ್. ಹರೀಶ್ ಬಾಬು, ನಿಶಾನಿ ದಶರತ್, ಓ. ತಿಪ್ಪೇಸ್ವಾಮಿ, ಚಂದ್ರಪ್ಪ, ಎ. ಚಂಪಕ, ಸರ್ಕಾರಿ ನಾಮನಿರ್ದೇಶಕ ಪಿ. ಷಬ್ಬೀರ್, ವೃತ್ತಿಪರ ನಿರ್ದೇಶಕರುಗಳಾದ ಕೆ. ದೊರೆಸ್ವಾಮಿ, ಸಿ.ಕೆ. ಸತ್ಯಮೂರ್ತಿ, ಆರ್ಥಿಕ ಸಲಹೆಗಾರ ಮೊಹಮ್ಮದ್ ನಯೀಮ್, ಮತ್ತು ಪ್ರಭಾರಿ ವ್ಯವಸ್ಥಾಪಕ ಮಂಜುನಾಥ್ ಗೌಡ, ಎಂ. ಪ್ರಕಾಶ್ ಉಪಸ್ಥಿತರಿದ್ದರು.