ಸಿಇಟಿ ವಿದ್ಯಾರ್ಥಿಗಳೇ ಎಚ್ಚರ: ಪ್ರವೇಶ ಪತ್ರ ಡೌನ್‌ಲೋಡ್ ಹೆಸರಿನಲ್ಲಿ ಸೈಬರ್ ವಂಚನೆ, ನಕಲಿ ವೆಬ್‌ಸೈಟ್ ಬಗ್ಗೆ KEA ವಾರ್ನಿಂಗ್!

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಇದೀಗ ವಿದ್ಯಾರ್ಥಿಗಳು ಸಿಇಟಿ (CET) ಪರೀಕ್ಷೆಯತ್ತ ಮುಖ ಮಾಡಿದ್ದಾರೆ. ಆದರೆ, ಇದೇ ಸಂದರ್ಭವನ್ನು ಬಳಸಿಕೊಳ್ಳಲು ಹೊಂಚು ಹಾಕಿರುವ ಸೈಬರ್ ವಂಚಕರು ಮುಗ್ಧ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ವಂಚನೆಗೆ ಇಳಿದಿದ್ದಾರೆ. ಸಿಇಟಿ ಪ್ರವೇಶ ಪತ್ರ (Hall Ticket) ಡೌನ್‌ಲೋಡ್ ಮಾಡುವ ನೆಪದಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿ ಕದಿಯುತ್ತಿರುವ ಆತಂಕಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಈ ಕುರಿತು ಎಚ್ಚರಿಕೆ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ, “ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಅನಧಿಕೃತ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಕೇವಲ ಅಧಿಕೃತ ವೆಬ್‌ಸೈಟ್ ಮೂಲಕವೇ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇತ್ತೀಚೆಗಷ್ಟೇ ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಹೆಸರಿನಲ್ಲಿ ವಿದ್ಯಾರ್ಥಿಗಳ ದಾರಿ ತಪ್ಪಿಸಲು ಯತ್ನಿಸಿದ್ದ ಕಿಡಿಗೇಡಿಗಳು, ಇದೀಗ ಕೆಇಎ (KEA) ಮಾದರಿಯಲ್ಲೇ ಅಚ್ಚುಕಟ್ಟಾದ ನಕಲಿ ವೆಬ್‌ಸೈಟ್ ರೂಪಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ನಕಲಿ ವೆಬ್‌ಸೈಟ್ ಲಿಂಕ್ ಯಾವುದು? ಏಪ್ರಿಲ್ 23 ಮತ್ತು 24 ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ಈಗಾಗಲೇ ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಲ್ ಟಿಕೆಟ್ ಲಭ್ಯವಿದೆ. ಆದರೆ, ವಂಚಕರು https://applytocollege.co/kcet_admit_card_2026 ಎಂಬ ನಕಲಿ ಲಿಂಕ್ ಅನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಲಿಂಕ್ ಮೂಲಕ ಯಾವುದೇ ಕಾರಣಕ್ಕೂ ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ, ಬದಲಾಗಿ ವಿದ್ಯಾರ್ಥಿಗಳ ಅಮೂಲ್ಯವಾದ ಖಾಸಗಿ ಮಾಹಿತಿ ವಂಚಕರ ಪಾಲಾಗುತ್ತದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಅಧಿಕೃತ ಲಿಂಕ್ ಇಲ್ಲಿದೆ: ವಿದ್ಯಾರ್ಥಿಗಳು ಹಾಗೂ ಪೋಷಕರು ಎಚ್ಚರವಹಿಸಿ ಕಡ್ಡಾಯವಾಗಿ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/UGCET_Admit_Card_2026/Forms/Login.aspx ಗೆ ಭೇಟಿ ನೀಡಿ, ಅಲ್ಲಿಯೇ ಲಾಗಿನ್ ಆಗುವ ಮೂಲಕ ತಮ್ಮ ಪರೀಕ್ಷಾ ಪ್ರವೇಶ ಪತ್ರವನ್ನು ಸುರಕ್ಷಿತವಾಗಿ ಡೌನ್‌ಲೋಡ್ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

Leave a Reply

Your email address will not be published. Required fields are marked *