ಚಿತ್ರದುರ್ಗ ಅ. 08
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸಂಗೀತವು ನಮ್ಮ ಸಂಸ್ಕೃತಿ ಮತ್ತು ಭಾವನೆಗಳ ಅಭಿವೃದ್ಧಿಗೆ ಒಂದು ಪ್ರಮುಖವಾದ ಮಾಧ್ಯಮವಾಗಿದೆ ಎಂದು ಉಪನ್ಯಾಸಕ ಹಾಗೂ ರೋಟರಿ ಕ್ಲಬ್ ಅಧ್ಯಕ್ಷರಾದ ರೊ. ಯೋಗೀಶ್ ಸಹ್ಯಾದ್ರಿ ಹೇಳಿದರು.
ನಗರದ ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಯ ಶಾಲಾ ಸಭಾಂಗಣದಲ್ಲಿ ಶ್ರೀಸಾಹಿತ್ಯ ಸಾಮ್ರಾಜ್ಯ ನಾಟ್ಯ ಸಂಘ ಮಠದ ಕುರುಬರಹಟ್ಟಿ, ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಂಗೀತೋತ್ಸವ ,ರಂಗ ಕಲಾವಿದರಿಗೆ ಸನ್ಮಾನ ಹಾಗೂ ಹಾಸ್ಯರಂಗ ದೃಶ್ಯಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತವು ವಿಲಾಸಕ್ಕಾಗಿ ಇರುವಂತದ್ದಲ್ಲ, ವಿಕಾಸಕ್ಕಾಗಿ ಇರುವಂತಹದ್ದು ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು,ಅಲ್ಲದೇ ಕಲಾಪರಂಪರೆಯು ನಮ್ಮ ಗುರುತು ,ಇತಿಹಾಸ ಮತ್ತು ಮೌಲ್ಯಗಳನ್ನು
ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಅತ್ಯಂತ ಮುಖ್ಯವಾದದು, ಇದು ನಮ್ಮಲ್ಲಿ ಸಂಸ್ಕಾರವನ್ನು ಕೊಡುತ್ತದೆ, ಅಲ್ಲದೇ ಈ ನೆಲದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ತತ್ವಪದಗಳು ,ವಚನ, ದಾಸರಪದ ,ಗೀಗಿ ಪದಗಳು, ಸೋಬಾನೆ ಪದಗಳು, ಜನಪದ ಗೀತೆಗಳು ನಮ್ಮಲ್ಲಿ ವಿವೇಚನೆ ಹಾಗೂ ವಿವೇಕವನ್ನು ಬೆಳೆಸುವುದರಿಂದ ಕಲೆಯನ್ನು ಗೌರವಿಸಿ ಆಸ್ವಾದಿಸಬೇಕು ಎಂದು ತಿಳಿಸಿದರು.
ಪ್ರಗತಿಪರ ಚಿಂತಕ ಹೆಚ್ ಆನಂದ್ ಕುಮಾರ್ ಮಾತನಾಡಿ ಸಂಗೀತವು ಒತ್ತಡವನ್ನು ಕಡಿಮೆ ಮಾಡಿ, ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ ಹಾಗಾಗಿ ಪ್ರತಿಯೊಬ್ಬರು ಸಂಗೀತವನ್ನು ಆಸ್ವಾದಿಸಬೇಕು ಹಾಗೂ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಂಗಭೂಮಿಗೆ ತಮ್ಮದೇ ಆದ ಕೊಡುಗೆ ನೀಡಿರುವ ರಂಗ ಕಲಾವಿದರನ್ನು ಗುರುತಿಸಿ ಗೌರವಿಸಿ
ಸನ್ಮಾನಿಸಲಾಯಿತು. ರಂಗಭೂಮಿಯ ಬೆಳವಣಿಗೆಗೆ ಕಲಾವಿದರು ಸಲ್ಲಿಸುತ್ತಿರುವ ಸೇವೆಯನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಹಾಸ್ಯರಂಗ ದೃಶ್ಯಾವಳಿಯು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಕಲಾವಿದರ ಹಾಸ್ಯ ಭರಿತ ಅಭಿನಯ, ಸಂಭಾಷಣೆ ಹಾಗೂ ಸಮಯೋಚಿತ ಹಾಸ್ಯಕ್ಕೆ ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದರು, ವಿವಿಧ ಕಲಾ ತಂಡದವರು ಜಾನಪದ ಗೀತೆ, ಭಾವಗೀತೆಗಳು,ತತ್ವಪದ , ರಂಗಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಮೀನಾಕ್ಷಮ್ಮ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಬಸಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮಯ್ಯ,ಪಿಎಸ್ಐ ಯಶೋಧಮ್ಮ, ಶಿಕ್ಷಕ ತಿಪ್ಪೇಸ್ವಾಮಿ, ರಂಗಭೂಮಿ ಕಲಾವಿದ ನಾಗೇಂದ್ರ,ಕಲಾವಿದೆ ನಳಿನಿ ನಾಗೇಂದ್ರ, ಗಾಯಕರುಗಳಾದ ಅಂಜಿನಪ್ಪ, ಮಲ್ಲಿಕಾರ್ಜುನ, ಸಿ.ತಬಲ ಜಯಣ್ಣ, ಚನ್ನಬಸಪ್ಪ, ಪ್ರಶಿಕ್ಷಣಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಗಾಯಕ ಅಮುಕುಂದಿ ಗಂಗಾಧರ ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.