IPL 2026: PBKS ವಿರುದ್ಧ SRHಗೆ 33 ರನ್‌ಗಳ ಭರ್ಜರಿ ಜಯ: ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಹೈದರಾಬಾದ್

​ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಪಂಜಾಬ್ ಕಿಂಗ್ಸ್ (PBKS) ವಿರುದ್ಧ 33 ರನ್‌ಗಳ ಭವ್ಯ ಗೆಲುವು ದಾಖಲಿಸಿದೆ. ಈ ರೋಚಕ ಗೆಲುವಿನ ಮೂಲಕ ಸನ್‌ರೈಸರ್ಸ್ ಅಂಕಪಟ್ಟಿಯಲ್ಲಿ ಪಂಜಾಬ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು (ನಂಬರ್ 1) ಅಲಂಕರಿಸಿದ್ದರೆ, ಪಂಜಾಬ್ 2ನೇ ಸ್ಥಾನಕ್ಕೆ ಕುಸಿದಿದೆ.

ಬೃಹತ್ ಮೊತ್ತ ಪೇರಿಸಿದ ಸನ್‌ರೈಸರ್ಸ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್‌ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 235 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭಿಕರಾದ ಟ್ರಾವಿಸ್ ಹೆಡ್ (38 ರನ್, 19 ಎಸೆತ) ಹಾಗೂ ಅಭಿಷೇಕ್ ಶರ್ಮಾ (35 ರನ್, 13 ಎಸೆತ) ಮೊದಲ ವಿಕೆಟ್‌ಗೆ 54 ರನ್‌ಗಳ ಸ್ಪೋಟಕ ಆರಂಭ ಒದಗಿಸಿದರು.

​ನಂತರ ಕ್ರೀಸ್‌ಗೆ ಬಂದ ಇಶಾನ್ ಕಿಶನ್ ಕೇವಲ 32 ಎಸೆತಗಳಲ್ಲಿ 55 ರನ್ ಸಿಡಿಸುವ ಮೂಲಕ ಈ ಆವೃತ್ತಿಯ ತಮ್ಮ ನಾಲ್ಕನೇ ಅರ್ಧಶತಕ ಪೂರೈಸಿದರು. ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ಹೆನ್ರಿಕ್ ಕ್ಲಾಸೆನ್ 43 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 69 ರನ್ ಚಚ್ಚಿದರು. ಅಂತಿಮ ಓವರ್‌ಗಳಲ್ಲಿ ಮಿಂಚಿದ ನಿತೀಶ್ ಕುಮಾರ್ ರೆಡ್ಡಿ (ಅಜೇಯ 29 ರನ್, 13 ಎಸೆತ) ತಂಡದ ಮೊತ್ತವನ್ನು 235ಕ್ಕೆ ಕೊಂಡೊಯ್ದರು.

ಆರಂಭಿಕ ಆಘಾತ ಅನುಭವಿಸಿದ ಪಂಜಾಬ್

236 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ಕೇವಲ 4 ರನ್ ಆಗುವಷ್ಟರಲ್ಲಿ ಪ್ರಭಸಿಮ್ರನ್ ಸಿಂಗ್ (3) ಹಾಗೂ ಪ್ರಿಯಾಂಶ್ ಆರ್ಯ (1) ಪೆವಿಲಿಯನ್ ಸೇರಿದರು. ನಾಯಕ ಶ್ರೇಯಸ್ ಅಯ್ಯರ್ (5) ಕೂಡ ಪವರ್‌ಪ್ಲೇನಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. 23 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡ ಪಂಜಾಬ್‌ಗೆ ಮಾರ್ಕಸ್ ಸ್ಟೋಯ್ನಿಸ್ (28 ರನ್, 14 ಎಸೆತ) ಹಾಗೂ ಸುರ್ಯಾಂಶ್ ಶೆಡ್ಗೆ (25 ರನ್, 17 ಎಸೆತ) ತುಸು ಚೇತರಿಕೆ ನೀಡಿದರೂ, ಬೃಹತ್ ಮೊತ್ತದ ಒತ್ತಡದಲ್ಲಿ ವಿಕೆಟ್ ಕೈಚೆಲ್ಲಿದರು.

ವ್ಯರ್ಥವಾದ ಕೊನೊಲಿ ಶತಕದ ಹೋರಾಟ

ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ, 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದಿದ್ದ ಕೂಪರ್ ಕೊನೊಲಿ ಏಕಾಂಗಿ ಹೋರಾಟ ನಡೆಸಿದರು. ಕೇವಲ 59 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 107 ರನ್ ಗಳಿಸಿದರು. ಆದರೆ, ಇತರೆ ಬ್ಯಾಟರ್‌ಗಳಿಂದ ಸೂಕ್ತ ಸಾಥ್ ಸಿಗದ ಕಾರಣ ಪಂಜಾಬ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 202 ರನ್‌ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಮಿಂಚಿದ ಹೈದರಾಬಾದ್ ಬೌಲರ್‌ಗಳು

ಬೃಹತ್ ಮೊತ್ತವನ್ನು ಯಶಸ್ವಿಯಾಗಿ ರಕ್ಷಿಸಿಕೊಳ್ಳುವಲ್ಲಿ ಸನ್‌ರೈಸರ್ಸ್ ಬೌಲರ್‌ಗಳು ಸಂಘಟಿತ ಪ್ರದರ್ಶನ ನೀಡಿದರು. ನಾಯಕ ಪ್ಯಾಟ್ ಕಮಿನ್ಸ್ (2/34), ನಿತೀಶ್ ಕುಮಾರ್ ರೆಡ್ಡಿ (2/11) ಹಾಗೂ ಶಿವಾಂಗ್ ಕುಮಾರ್ (2/45) ತಲಾ ಎರಡು ವಿಕೆಟ್ ಪಡೆದು ಪಂಜಾಬ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇಶಾನ್ ಮಾಲಿಂಗ ಹಾಗೂ ಸಾಕಿಬ್ ಹುಸೇನ್ ತಲಾ ಒಂದು ವಿಕೆಟ್ ಪಡೆದು ಗೆಲುವಿಗೆ ಕಾಣಿಕೆ ನೀಡಿದರು.

Leave a Reply

Your email address will not be published. Required fields are marked *