ಚಿತ್ರದುರ್ಗ ಆ. 4
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನೂತನ ಸಚಿವರಾಗಿ ಪದಗ್ರಹಣ ಮಾಡಿರುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರಿಗೆ ಪುರ ಪ್ರವೇಶದ ಹಿನ್ನಲೆಯಲ್ಲಿ ಆ. 5 ರಂದು ನಗರದಲ್ಲಿ ಅದ್ದೂರಿ ಸ್ವಾಗತ ಕೋರಲು ಚಿತ್ರದುರ್ಗ ನಾಯಕ ಸಮಾಜದಿಂದ ತೀರ್ಮಾನಿಸಲಾಗಿದೆ ಎಂದು ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ತಿಪ್ಪೇಸ್ವಾಮಿ ಅವರ ನಂತರ ರಘುಮೂರ್ತಿ ಅವರಿಗೆ ಸಚಿವರಾಗುವ ಅವಕಾಶ ಸಿಕ್ಕಿದೆ. ಸಚಿವರಾದ ನಂತರ ಟಿ.ರಘು ಮೂರ್ತಿ ಅವರು ನಾಳೆ ಚಿತ್ರದುರ್ಗ ನಗರಕ್ಕೆ ಆಗಮಿಸುತ್ತಿದ್ದಾರೆ. ಅವರನ್ನು ಸಾರ್ವಜನಿಕರು ಹಾಗೂ ಅನೇಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಗುವುದು ಈ ಹಿನ್ನೆಲೆಯಲ್ಲಿ ಮದಕರಿ ನಾಯಕ ವೃತ್ತದಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೂ ಮೊದಲು ಚಳ್ಳಕೆರೆ ಗೇಟ್ನಿಂದ ಮೆರವಣಿಗೆ ನಡೆಯಲಿದ್ದು, ಮದಕರಿ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ಇರಲಿದೆ. ಯುವಕರ ಒತ್ತಾಯದ ಮೇರೆಗೆ ಸ್ಟಾಡಿಂಗ್ ಡಿಜೆ ಕೂಡಾ ಇರಲಿದೆ ಎಂದ ಅವರು. ಸಮುದಾಯದವರು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.
ನಿವೃತ್ತ ಪ್ರಾಚಾರ್ಯ ಪ್ರೊ.ಗುಡದೇಶ್ವರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಿಂದೆಂದೂ ಆಗದಷ್ಟು ಅಭಿವೃದ್ಧಿ ಕೆಲಸಗಳನ್ನು ಟಿ.ರಘುಮೂರ್ತಿ ಮಾಡಿದ್ದಾರೆ. ಅವರನ್ನು ಜಾತ್ಯಾತೀತವಾಗಿ ಜಿಲ್ಲೆಯ ಜನ ಒಪ್ಪಿಕೊಳ್ಳುತ್ತಾರೆ. ಚಳ್ಳಕೆರೆ ಮಾದರಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಆಗಬೇಕು ಎನ್ನುವ ಅಭಿಲಾಷೆ ಇದೆ ಪಕ್ಷಾತೀತವಾಗಿ ಅವರ ಪುರಪ್ರವೇಶ ಕಾರ್ಯಕ್ರಮ ಮಾಡಬೇಕು ಎಂದು ಸಮಾಜ ತೀರ್ಮಾನಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಖಂಡ ಲಿಂಗಾವರಹಟ್ಟಿ ತಿಪ್ಪೇಸ್ವಾಮಿ ಮಾತನಾಡಿ, ಶಾಸಕರಾದ ಟಿ.ರಘುಮೂರ್ತಿ ಅವರಿಗೆ ನಾಯಕ ಸಮುದಾಯದವರು ಎಂದು ಸಚಿವ ಸ್ಥಾನ ಕೊಟ್ಟಿಲ್ಲ. ಅವರು ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ನೋಡಿ ಆ ಸ್ಥಾನ ಒಲಿದು ಬಂದಿದೆ. ಅದೇ ರೀತಿಯಲ್ಲಿ ಚಿತ್ರದುರ್ಗದ ಅಭಿವೃದ್ಧಿ ಆಗಬೇಕು.ಹಿಂದೆ ನಗರಸಭೆ ಪ್ರಥಮ ಅಧ್ಯಕ್ಷರಾದ ಭೀಮಪ್ಪ ನಾಯಕರು ಮರ್ಚೆಂಟ್ ಬ್ಯಾಂಕ್ ಸ್ಥಾಪನೆ ಮಾಡಿದ್ದರು. ಅದು ಸಮುದಾಯದ ಕೈಯಲ್ಲಿಲ್ಲ ಆದರೆ, ಅದನ್ನು ಮೀರಿದಂತೆ ಬೆಳೆದಿರುವ ಡಿಸಿಸಿ ಬ್ಯಾಂಕಿಗೆ ರಘುಮೂರ್ತಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಅವರ ಬೆಳವಣಿಗೆ ಹಾಗೂ ವ್ಯಕ್ತಿತ್ವ ತೋರಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ದೀಪಕ್, ಅಹೋಬಲ ಟಿವಿಎಸ್ ಮಾಲಿಕ ಪಿ.ವಿ.ಅರುಣ್, ಮುಖಂಡ ಸೋಮೇಂದ್ರ ಭಾಗವಹಿಸಿದ್ದರು.