ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರಲ್ಲಿ ‘ಹೃದಯ ಕವಾಟದ ಕಾಯಿಲೆ’ (Heart Valve Disease) ಪ್ರಮುಖವಾಗಿದ್ದು, ಭಾರತದಲ್ಲಿ ಸಂಭವಿಸುವ ಶೇ.28ರಷ್ಟು ಹೃದಯ ಸಂಬಂಧಿ ಸಾವುಗಳಿಗೆ ಇದೇ ಕಾರಣವಾಗಿದೆ.
ಹೆಚ್ಚಿನ ಪ್ರಕರಣಗಳಲ್ಲಿ ಆರಂಭಿಕ ಹಂತದಲ್ಲಿ ಯಾವುದೇ ರೋಗಲಕ್ಷಣಗಳು ಗೋಚರಿಸುವುದಿಲ್ಲ. ಹೀಗಾಗಿ, ಸರಿಯಾದ ಸಮಯಕ್ಕೆ ಲಕ್ಷಣಗಳನ್ನು ಗುರುತಿಸಿ, ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಪ್ರಾಣಾಪಾಯವನ್ನು ತಪ್ಪಿಸಲು ಇರುವ ಅತ್ಯುತ್ತಮ ಮಾರ್ಗವಾಗಿದೆ.
ಏನಿದು ಹೃದಯ ಕವಾಟದ ಕಾಯಿಲೆ? ಸಾಮಾನ್ಯ ಹೃದಯಾಘಾತಕ್ಕೂ (Heart Attack) ಕವಾಟದ ಕಾಯಿಲೆಗೂ ವ್ಯತ್ಯಾಸವಿದೆ. ನಮ್ಮ ಹೃದಯದಲ್ಲಿ ರಕ್ತದ ಹರಿವನ್ನು ಸರಿಯಾದ ದಿಕ್ಕಿನಲ್ಲಿ ನಿರ್ವಹಿಸಲು ನಾಲ್ಕು ಪ್ರಮುಖ ಕವಾಟಗಳಿರುತ್ತವೆ (ಮಹಾಪಧಮನಿಯ, ಮಿಟ್ರಲ್, ಪಲ್ಮನರಿ ಮತ್ತು ಟ್ರೈಸ್ಕಪಿಡ್). ಈ ಕವಾಟಗಳು ಸರಿಯಾಗಿ ತೆರೆಯದಿದ್ದರೆ ಅಥವಾ ಮುಚ್ಚದಿದ್ದರೆ ದೇಹದ ವಿವಿಧ ಭಾಗಗಳಿಗೆ ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ಇದನ್ನೇ ‘ಹೃದಯ ಕವಾಟದ ಕಾಯಿಲೆ’ ಎಂದು ಕರೆಯಲಾಗುತ್ತದೆ.
ನಿರ್ಲಕ್ಷ್ಯ ಮಾಡಬಾರದ 5 ಆರಂಭಿಕ ಲಕ್ಷಣಗಳು: ದೀರ್ಘಕಾಲದವರೆಗೆ ಗುಪ್ತವಾಗಿರುವ ಈ ಸಮಸ್ಯೆಯು, ಈ ಕೆಳಗಿನ ಆರಂಭಿಕ ಲಕ್ಷಣಗಳನ್ನು ತೋರಿಸಬಹುದು:
- ವಿಪರೀತ ಆಯಾಸ: ಸಣ್ಣಪುಟ್ಟ ದೈಹಿಕ ಶ್ರಮಕ್ಕೂ ಅತಿಯಾಗಿ ಸುಸ್ತಾಗುವುದು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು.
- ಕಾಲು-ಕಣಕಾಲುಗಳಲ್ಲಿ ಊತ: ಪಾದಗಳಲ್ಲಿ ಕಾಣಿಸಿಕೊಳ್ಳುವ ಊತವನ್ನು ಸಾಮಾನ್ಯವೆಂದು ನಿರ್ಲಕ್ಷಿಸಬಾರದು. ಊತ ಕಂಡ ಕೂಡಲೇ ವೈದ್ಯರ ಸಲಹೆ ಪಡೆಯುವುದು ಉತ್ತಮ.
- ಎದೆ ನೋವು: ಆಗಾಗ್ಗೆ ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು ಮತ್ತು ಹೃದಯದ ಬಡಿತ ದಿಢೀರ್ ಹೆಚ್ಚಾಗುವುದು.
- ತಲೆತಿರುಗುವಿಕೆ: ಅತಿಯಾದ ಆಯಾಸದ ಜೊತೆಗೆ ಪದೇ ಪದೇ ತಲೆಸುತ್ತಿ ಬರುವಂತಹ ಅನುಭವವಾಗುವುದು.
- ಅಸಹಜ ಹೃದಯ ಬಡಿತ: ವೇಗವಾಗಿ ನಡೆಯುವಾಗ ಅಥವಾ ಮೆಟ್ಟಿಲುಗಳನ್ನು ಹತ್ತುವಾಗ ಹೃದಯದ ಬಡಿತದಲ್ಲಿ ಏರುಪೇರಾಗುವುದು.
ಈ ಕಾಯಿಲೆಗೆ ಪ್ರಮುಖ ಕಾರಣಗಳೇನು?
- ವಯಸ್ಸು ಮತ್ತು ಅನುವಂಶೀಯತೆ: ವಯಸ್ಸಾದಂತೆ ಈ ಸಮಸ್ಯೆ ಹೆಚ್ಚಾಗಬಹುದು. ಜೊತೆಗೆ, ಕುಟುಂಬದಲ್ಲಿ ಯಾರಿಗಾದರೂ ಈ ಕಾಯಿಲೆ ಇದ್ದರೆ, ಅಪಾಯದ ಸಾಧ್ಯತೆ ಹೆಚ್ಚು.
- ಜೀವನಶೈಲಿ: ಬೊಜ್ಜು, ಧೂಮಪಾನ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ ಚಿಕ್ಕ ವಯಸ್ಸಿನಲ್ಲಿಯೇ ಈ ಕಾಯಿಲೆಗೆ ದಾರಿ ಮಾಡಿಕೊಡಬಹುದು.
- ಇತರ ಆರೋಗ್ಯ ಸಮಸ್ಯೆಗಳು: ಮಧುಮೇಹ, ಅಧಿಕ ರಕ್ತದೊತ್ತಡ (BP) ಮತ್ತು ಸ್ವಯಂ ನಿರೋಧಕ ಕಾಯಿಲೆಗಳು ಸಹ ಕವಾಟದ ಹಾನಿಗೆ ಕಾರಣವಾಗುತ್ತವೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ವ್ಯತ್ಯಾಸ: ವೈದ್ಯಕೀಯ ತಜ್ಞರ ಪ್ರಕಾರ, ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಬದಲಾದ ಜೀವನಶೈಲಿ, ಅಧಿಕ ರಕ್ತದೊತ್ತಡ ಮತ್ತು ತಂಬಾಕು ಸೇವನೆಯಿಂದ ಈ ಕಾಯಿಲೆ ಬರುತ್ತಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಬಾಲ್ಯದಲ್ಲಿ ಬರುವ ಗಂಟಲು ಸೋಂಕಿಗೆ (ಸ್ಟ್ರೆಪ್ಟೋಕೊಕಲ್) ಸರಿಯಾದ ಚಿಕಿತ್ಸೆ ನೀಡದಿರುವುದು, ವಯಸ್ಸಿಗೆ ಬಂದ ನಂತರ ‘ರುಮಾಟಿಕ್ ಹೃದಯ ಕಾಯಿಲೆ’ಯಾಗಿ ಮಾರ್ಪಾಡಾಗುತ್ತಿದೆ.
ತಜ್ಞರ ಸಲಹೆ: ಯಾವುದೇ ಕಾಯಿಲೆಗೆ ಆಧುನಿಕ ತಂತ್ರಜ್ಞಾನದಲ್ಲಿ ಚಿಕಿತ್ಸೆ ಲಭ್ಯವಿದ್ದರೂ, ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡುವುದು ಅತ್ಯಂತ ನಿರ್ಣಾಯಕ. ಬಾಲ್ಯದಲ್ಲಿ ಬರುವ ಸೋಂಕುಗಳನ್ನು ನಿರ್ಲಕ್ಷಿಸದೆ ತಕ್ಷಣವೇ ಚಿಕಿತ್ಸೆ ಕೊಡಿಸಬೇಕು.
(ಸೂಚನೆ: ಈ ಲೇಖನವು ಕೇವಲ ಸಾಮಾನ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)