ಚಿತ್ರದುರ್ಗ,ಜೂ, 28 ನಮ್ಮ ನಿತ್ಯದ ಬದುಕು ಕ್ರಿಯಾಶೀಲತೆಯಿಂದ ಕೂಡಿರಬೇಕಾದರೆ ಯೋಗಭ್ಯಾಸವು ಮಾನವನ ದೇಹ ಮತ್ತು ಪ್ರಮಾಣಗಳ ವಿವೇಕ ಜ್ಞಾನವನ್ನು ಮೂಡಿಸುತ್ತದೆ .ಇದನ್ನು ನಮಗೆ ಪ್ರಪ್ರಥಮ ವಾದ್ಯ ಸಾಧನದಂತಿರುವ ಈ ನಮ್ಮ ದೇಹಕ್ಕೆ ಅಳವಡಿಸಿ ಕ್ರಮವರಿತು ಅದನ್ನು ನುಡಿಸಿದುದೇ ಆದರೆ ಅದರ ಅನುರಣನದಿಂದ ಉದಿಸಿದ ಆತ್ಯಂತಿಕ ಗಾನ ಮಾಧುರ್ಯದ ಸೌಖ್ಯವನ್ನು ನಾವು ಅನುಭವಿಸಬಹುದು. ಪ್ರತಿ ದಿನವೂ ಬಿಡದೆ ತಾಳ್ಮೆಯನ್ನು ಕುಂದಿಸದ ,ಹುರುಪಿನಿಂದ ಈ ಯೋಗಭ್ಯಾಸಕ್ಕೆ ನಮ್ಮ ದೇಹವನ್ನು ಒಳಪಡಿಸಿದಲ್ಲಿ ದೇಹದೊಳಗಿನ ಪ್ರತಿಯೊಂದು ಜೀವಕೋಶವು ಉತ್ತಮಗೊಂಡು ತನ್ನಲ್ಲಡಗಿರುವ ಚೈತನ್ಯ ಶಕ್ತಿಯನ್ನು ಹೊರಹೊಮ್ಮಿಸಿ ಆ ಮೂಲಕ ಜೀವಿತದ ಆಶಯವನ್ನು ಈ ಯೋಗ ಕ್ರಮ ನೆರವೇರಿಸಿ ಕೊಡುತ್ತದೆ ಎಂದು ಯೋಗಾಚಾರ್ಯ ಎಲ್.ಎಸ್. ಚಿನ್ಮಯಾನಂದ ಅವರು ಅಭಿಪ್ರಾಯಪಟ್ಟರು.

ಅವರ ನಗರದ ಜೋಗಿ ಮಟ್ಟಿ ರಸ್ತೆಯಲ್ಲಿರುವ ದಾರುಕ ಬಡಾವಣೆಯ ಸಮಿತಿಯವರು ಗಣಪತಿ ದೇವಾಲಯದ ಪ್ರಾಂಗಣದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ನಾವು ಪಾದದಿಂದ ಹಿಡಿದು ಮೆದುಳಿನ ತನಕ ಕನಿಷ್ಠ ಒಂದು ಗಂಟೆ ಪ್ರಾಣಾಯಾಮ ಮಾಡಿದರೆ ಮನುಷ್ಯನ ಮನಸ್ಸು ಆಹ್ಲದಕರವಾಗುತ್ತದೆ. ಹಾಗೆ ಆಸನಗಳನ್ನು ಮಾಡುವುದರಿಂದ ದೇಹ ಸಮಸ್ಥಿತಿಯಲ್ಲಿರುತ್ತದೆ. ನಾವು ಯಾವುದಾದರು ಒಂದು ಕಾಯಿಲೆ ಬಂದಾಗ ಇಂತಹ ಅಭ್ಯಾಸದ ಕಡೆಗೆ ಬರುವುದಕ್ಕಿಂತ ಶರೀರ ಸದಾ ಸದೃಢತೆಯಿಂದ ಲವಲವಿಕೆಯಿಂದ ಇರಬೇಕಾದರೆ ಪ್ರಾಣಾಯಾಮ, ಯೋಗಾಸನ ಮತ್ತು ಧ್ಯಾನ ಅವಶ್ಯ ಮಾಡುವುದರಿಂದ ಸಾಧ್ಯವಾದಷ್ಟು ಮನಸ್ಸು ಮತ್ತು ದೇಹ ಸಮಸ್ಥಿತಿಯಲ್ಲಿಡಲು ನೆರವಾಗುತ್ತದೆ. ಒಂದೊಂದು ಆಸನ ಒಂದೊಂದು ಕಾಯಿಲೆಗೆ ಸಹಕಾರಿಯಾಗುತ್ತದೆ. ಸಾಧ್ಯವಾದಷ್ಟು ಮೊಬೈಲ್ ಕಡಿಮೆ ಮಾಡುವುದು ಒಳ್ಳೆಯದು ಎಂದ ಅವರು ನಮ್ಮ ಯೋಗ ತರಬೇತಿ ಕೇಂದ್ರಗಳು ನಗರದ ಏಳೆಂಟು ಕಡೆ ಯೋಗಾಭ್ಯಾಸ ತರಬೇತಿ ಹೇಳುವಲ್ಲಿ ಸಕ್ರಿಯವಾಗಿವೆ. ಎಲ್ಲ ಬಡಾವಣೆಯ ನಾಗರಿಕರು ಈ ಯೋಗದ ಕಡೆಗೆ ಬಂದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಎಂದು ಅನೇಕ ಆಸನಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಿ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಆರ್ .ಮಂಜುನಾಥ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಬಡಾವಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಮಾಡುತ್ತಿರುವ ಸಮಾನ ಮನಸ್ಕರು ಸೇರಿ ಯೋಗ ಸೇರಿದಂತೆ ಅನೇಕ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರಲಾಗುತ್ತದೆ .ಇದಕ್ಕೆ ಬಡಾವಣೆಯವರ ಸಹಕಾರ ಸದಾ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಯೋಗ ತರಬೇತುದಾರರಾದ ನೇತ್ರಾವತಿ ಹಾಗೂ ಕ್ರೀಡಾಪಟು ಸತೀಶ್ ಅವರುಗಳನ್ನು ಸನ್ಮಾನಿಸಲಾಯಿತು.
ದಾರುಕ ಬಡಾವಣೆಯ ಅಧ್ಯಕ್ಷರಾದ ಎಸ್. ಟಿ. ರಂಗಸ್ವಾಮಿ ,ಈ. ಶಿವಕುಮಾರ್ ,ಪ್ರೊಫೆಸರ್ ಚಂದ್ರಶೇಖರ್, ಶ್ರೀಧರ್, ಹೇಮಂತ್ ಕುಮಾರ್, ವಿನಯ್ ಕುಮಾರ್, ವಿಜಯಕುಮಾರ್ ಕೆ.ಓ. ಚಂದ್ರಶೇಖರ್ ,ಪ್ರಸನ್ನ ಕುಮಾರ್ ,ನ್ಯಾಯವಾದಿ ಲಿಂಗಣ್ಣ ,ಯೋಗ ತರಭೇತುದಾರ ಬಿ.ಎಂ. ಮುರುಳಿ, ರೇಖಾ ಶಿವಕುಮಾರ್ ,ಭಾರ್ಗವಿರಾಜೀ ವಲೋಚನಾ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಯೋಗ ತರಬೇತಿ ನೀಡುವ ಹಾಗೂ ಯೋಗಭ್ಯಾಸಿಗಳು ಭಾಗವಹಿಸಿದ್ದರು.
ಬಡಾವಣೆಯ ಅನುಸೂಯಾ ,ರಂಗಸ್ವಾಮಿ, ನಯನ ,ಮಲ್ಲಿಕಾರ್ಜುನ ಮತ್ತು ಮಕ್ಕಳು ಹಾಗೂ ವಾಕರ್ಸ್ ಬ್ಯಾಚ್ನ ಪದಾಧಿಕಾರಿಗಳು ಕಾರ್ಯಕ್ರಮದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಸಂಘಟಿಸಿ ಯಶಸ್ವಿಗೊಳಿಸಿದರು.
ಆರಂಭಕ್ಕೆ ಲೀಲಾವತಿ ಮಂಜುನಾಥ್ ಪ್ರಾರ್ಥನೆ ಮಾಡಿದರು ಪ್ರೊ. ಆರ್. ಕೆ.ಕೇದಾರನಾಥ್ ಕಾರ್ಯಕ್ರಮ ನಿರ್ವಹಿಸಿದರು.