ಲಕ್ನೋದ ಎಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 50ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (LSG) 9 ರನ್‌ಗಳ ರೋಚಕ ಜಯ ಸಾಧಿಸಿದೆ. ಮಳೆಯಿಂದಾಗಿ ತಲಾ 19 ಓವರ್‌ಗಳಿಗೆ ಕಡಿತಗೊಂಡಿದ್ದ ಈ ಪಂದ್ಯದಲ್ಲಿ ಡಿಎಲ್ಎಸ್ (DLS) ನಿಯಮದನ್ವಯ ಲಕ್ನೋ ನೀಡಿದ್ದ 213 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ನಿಗದಿತ ಓವರ್‌ಗಳಲ್ಲಿ 203 ರನ್ ಕಲೆಹಾಕಲಷ್ಟೇ ಶಕ್ತವಾಗಿ ಸತತ ಎರಡನೇ ಸೋಲಿಗೆ ಶರಣಾಗಿದೆ. ಈ ಗೆಲುವಿನೊಂದಿಗೆ ಲಕ್ನೋ ಈ ಆವೃತ್ತಿಯಲ್ಲಿ ಮೂರನೇ ಜಯ ದಾಖಲಿಸಿದೆ.


ಮಿಚೆಲ್ ಮಾರ್ಷ್ ಅಬ್ಬರದ ಶತಕ:
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು 19 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಲಕ್ನೋ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಮಿಚೆಲ್ ಮಾರ್ಷ್ ಕೇವಲ 56 ಎಸೆತಗಳಲ್ಲಿ 9 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 111 ರನ್ ಸಿಡಿಸಿದರು. ನಿಕೋಲಸ್ ಪೂರನ್ 38 ರನ್ ಗಳಿಸಿದರೆ, ಅಂತಿಮ ಓವರ್‌ಗಳಲ್ಲಿ ಅಬ್ಬರಿಸಿದ ನಾಯಕ ರಿಷಭ್ ಪಂತ್ ಕೇವಲ 10 ಎಸೆತಗಳಲ್ಲಿ ಅಜೇಯ 32 ರನ್ ಚಚ್ಚಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಆರ್‌ಸಿಬಿ ಪರ ಬೌಲಿಂಗ್‌ನಲ್ಲಿ ಜೋಶ್ ಹ್ಯಾಜಲ್‌ವುಡ್, ಕೃನಾಲ್ ಪಾಂಡ್ಯ ಮತ್ತು ರಸಿಕ್ ಸಲಾಮ್ ತಲಾ ಒಂದೊಂದು ವಿಕೆಟ್ ಪಡೆದರು.


ಆರ್‌ಸಿಬಿ ಕಳಪೆ ಆರಂಭ ಹಾಗೂ ದಿಟ್ಟ ಹೋರಾಟ:
213 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲೇ ಆಘಾತ ಅನುಭವಿಸಿತು. ಮೊದಲ ಓವರ್‌ನಲ್ಲೇ ಮೊಹಮ್ಮದ್ ಶಮಿ ಅವರು ಜಾಕೋಬ್ ಬೆಥೆಲ್ ಅವರನ್ನು ಪೆವಿಲಿಯನ್ ಭೇಟೆಯಾಡಿದರೆ, ಎರಡನೇ ಓವರ್‌ನಲ್ಲಿ ಪ್ರಿನ್ಸ್ ಯಾದವ್ ಅವರು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ (ಡಕ್ ಔಟ್) ಔಟ್ ಮಾಡಿದರು.
ಆರಂಭಿಕ ಆಘಾತದ ನಡುವೆಯೂ ನಾಯಕ ರಜತ್ ಪಾಟಿದಾರ್ (61 ರನ್) ಹಾಗೂ ಟಿಮ್ ಡೇವಿಡ್ (40 ರನ್) ಉತ್ತಮ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಆದರೆ, ಶಹಬಾಜ್ ಅಹ್ಮದ್ ಈ ಇಬ್ಬರು ಪ್ರಮುಖ ಬ್ಯಾಟರ್‌ಗಳನ್ನು ಬಲಿಪಡೆದು ಆರ್ಸಿಬಿಗೆ ಪೆಟ್ಟು ನೀಡಿದರು. ಅಂತಿಮ ಹಂತದಲ್ಲಿ ಕೃನಾಲ್ ಪಾಂಡ್ಯ 16 ಎಸೆತಗಳಲ್ಲಿ ಅಜೇಯ 28 ರನ್ ಸಿಡಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ಕೊನೆಯ ಓವರ್‌ನಲ್ಲಿ ಲಕ್ನೋ ಬೌಲರ್ ದಿಗ್ವೇಶ್ ರಥಿ 20 ರನ್ ಡಿಫೆಂಡ್ ಮಾಡಿಕೊಂಡು ತಮ್ಮ ತಂಡಕ್ಕೆ ಜಯ ತಂದುಕೊಟ್ಟರು. ಪಂದ್ಯದಲ್ಲಿ ಒಟ್ಟು 3 ವಿಕೆಟ್ ಕಬಳಿಸಿದ ಪ್ರಿನ್ಸ್ ಯಾದವ್ ಲಕ್ನೋ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಂಕಪಟ್ಟಿಯಲ್ಲಿ ಬದಲಾವಣೆ ಇಲ್ಲ:
ಈ ಪಂದ್ಯದ ಫಲಿತಾಂಶದ ನಂತರವೂ ಅಂಕಪಟ್ಟಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಾಗಿಲ್ಲ. ಆರ್‌ಸಿಬಿ ಸತತ ಎರಡನೇ ಸೋಲು ಕಂಡರೂ ಮೂರನೇ ಸ್ಥಾನದಲ್ಲೇ ಮುಂದುವರಿದಿದ್ದರೆ, ಲಕ್ನೋ 2 ಅಂಕಗಳ ಸಂಪಾದನೆಯೊಂದಿಗೆ ತನ್ನ ಅಭಿಯಾನವನ್ನು ಮುಂದುವರಿಸಿದೆ.